ಸಾರಾಂಶ
ಮಾಗಡಿ: ಭಾರತೀಯ ಸಂಸ್ಕಾರ ಸಂಸ್ಕೃತಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡೀ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ತಾಲೂಕಿನ ಮರಳುದೇವನಪುರದಲ್ಲಿ 500 ವರ್ಷದ ಹಳೆಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಪ್ರಾರಂಭೋತ್ಸವ ಮತ್ತು ನೂತನ ದೇವಾಲಯದ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಬಂದ ನಂತರ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಉಂಟಾಗಿತ್ತು. ನಂತರ ಈಗ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಜಾತ್ರೆ, ದೇವಸ್ಥಾನಗಳ ಉದ್ಘಾಟನೆ ನಡೆಯುತ್ತಿದೆ. ಭಾರತೀಯ ಸಂಸ್ಕಾರ, ಸಂಸ್ಕೃತಿ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಸೇವೆಯಲ್ಲಿ ತೊಡಗಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪಾರ್ಲಿಮೆಂಟ್ ರೀತಿಯಲ್ಲಿದ್ದು ಸಾಮಾಜಿಕ ಕ್ರಾಂತಿ ಮಾಡಿ ದೇಶದಲ್ಲಿ ಸಮಾನ ತತ್ವ ಸಾರಿದರು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಾವು ನಡೆಯುತ್ತಿದ್ದು ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಠಮಾನ್ಯಗಳ ಅಭಿವೃದ್ಧಿಗೆ ಶ್ರೀಗಳು ನನ್ನನ್ನು ಭೇಟಿ ಮಾಡಿದಾಗ 200 ಮಠಗಳಿಗೆ ಅನುದಾನ ಬಿಡುಗಡೆ ಮಾಡಿದ್ದೆ. ಈಗ ಉದ್ಘಾಟನೆ ಆಗುತ್ತಿರುವ ದೇವಸ್ಥಾನ ಮತ್ತು ಚಕ್ರಬಾವಿಯ ಮಠಕ್ಕೆ ಅನುದಾನ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ಅಧಿಕಾರ ಇದ್ದಾಗ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಕೆಲಸ ಆಗಬೇಕಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಿ ದೇಶದಲ್ಲಿ ಸಂಚಲನ ಮೂಡಿದೆ ಎಂದು ತಿಳಿಸಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ಜನರಲ್ಲಿ ಎಷ್ಟೇ ಹಣವಿದ್ದರೂ ನೆಮ್ಮದಿ ಸಿಗುವ ತಾಣವೆಂದರೆ ಅದು ದೇವಾಲಯ ಮಾತ್ರ. ದೇವಸ್ಥಾನಗಳಲ್ಲಿ ಪ್ರತಿನಿತ್ಯ ಪೂಜೆ ಮಾಡಿದಾಗ ಮಾತ್ರ ದೇವರಿಗೆ ಶಕ್ತಿ ಬರಲಿದ್ದು ಅಳಿಯ ದೇವಸ್ಥಾನವನ್ನು ಚಕ್ರಬಾವಿ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳ ಶ್ರಮದಿಂದ ನಿರ್ಮಾಣವಾಗಿದ್ದು ಅವರ ಶ್ರಮಕ್ಕೆ ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.ಚಕ್ರಬಾವಿ ಮಠ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪುರಾತನ ದೇವಸ್ಥಾನವನ್ನು ಭವ್ಯವಾಗಿ ನಿರ್ಮಾಣ ಮಾಡಿದ್ದು ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲಾ ಭಕ್ತರಿಗೂ ದೇವಿಯ ಕೃಪೆ ಸಿಗಲಿ. ದೇವಿಯ ಕೃಪೆಯಿಂದ ತಾಲೂಕಿನಲ್ಲಿ ಒಳಿತುಂಟಾಗಲಿ ಎಂದು ಹಾರೈಸಿದರು.
ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಕಳಶ ಪೂಜೆ, ವಿಗ್ರಹ ಸ್ಥಾಪನೆ, ಮಹಾರುದ್ರಭಿಷೇಕ, ಅಷ್ಪೋತ್ತರ ಪೂಜೆ, ಹೂವಿನ ಅಲಂಕಾರ, ನೇತ್ರೋನ್ಮಲನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಲಿಂಗ ಮಠ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕನಕಪುರ ಮಠದ ಮುಮ್ಮಡಿ ನಿರ್ವಹಣಾ ಮಹಾ ಸ್ವಾಮೀಜಿ, ಬೆಟ್ಟದಪುರದ ಶ್ರೀ ಚನ್ನಬಸವ ದೇಶಿ ಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠಾಧ್ಯಕ್ಷರಾದ ಸೌಮ್ಯಾನಂದನಾಥ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ಷಡಕ್ಷರಿ ಸ್ವಾಮೀಜಿ, ಹೊನ್ನಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ರುದ್ರಮನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ಜೆಡಿಎಸ್, ಕಾಂಗ್ರೆಸ್ ಮುಖಂಡರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ಪೋಟೋ 22ಮಾಗಡಿ3:ಮಾಗಡಿ ತಾಲೂಕಿನ ಮರಳುದೇವನಪುರದ ಶ್ರೀ ಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಪ್ರಾರಂಭೋತ್ಸವ ಗೋಪುರ ಕಳಶ ಪ್ರತಿಷ್ಠಾಪನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರು. ಚಕ್ರಬಾವಿ ಜಂಗಮ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಿದ್ದರು.