ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದ ಪ್ರಧಾನಿಯಾಗಿ ಭಾನುವಾರ ದೆಹಲಿಯಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಶಿವಮೊಗ್ಗ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.ಭಾನುವಾರ ಸಂಜೆ ನರೇಂದ್ರ ಮೋದಿ ಪ್ರಮಾಣ ಸ್ವೀಕರಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ, ಮುಖಂಡರಾದ ಗಿರೀಶ್ ಪಟೇಲ್ ಸೇರಿ ಹಲವು ಮುಖಂಡರು ಪಕ್ಷದ ಕಚೇರಿಗೆ ಆಗಮಿಸಿ ಮೋದಿ ಪ್ರಮಾಣ ವಚನ ನೇರಪ್ರಸಾರ ವೀಕ್ಷಿಸಿದರು. ಪ್ರಮಾಣ ವಚನ ಸ್ವೀಕಾರ ಬಳಿಕ ಕಾರ್ಯಕರ್ತರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಬಿಜೆಪಿ ಕಚೇರಿಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಶಿವಮೊಗ್ಗದಲ್ಲಿ ಸಂಭ್ರಮ:ಎನ್‌ಡಿಎ ಮೈತ್ರಿ ಕೂಟದ ಕೇಂದ್ರ ಸರ್ಕಾರದಲ್ಲಿ ಜೆಡಿಎಸ್ ನಾಯಕ, ಸಂಸದ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಇತ್ತ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಶಿವಮೊಗ್ಗದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಸಂಜೆ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್, ನಗರ ಅಧ್ಯಕ್ಷ ದೀಪಕ್ ಸಿಂಗ್ ಸೇರಿ ಹಲವು ಕಾರ್ಯಕರ್ತರು ಮತ್ತಿತರರಿದ್ದರು.