ಮೋದಿ ಪ್ರಮಾಣವಚನ: ಹೊಸಪೇಟೆಯಲ್ಲಿ ಬೃಹತ್ ಬೈಕ್‌ ರ್‍ಯಾಲಿ

| Published : Jun 10 2024, 12:47 AM IST

ಸಾರಾಂಶ

ವಿಜಯನಗರ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗದಿಂದ ನೂರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಹೊಸಪೇಟೆ: ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್‌ ಬೈಕ್‌ ರ್‍ಯಾಲಿ ನಡೆಸಿದರು.

ನಗರದ ಶ್ರೀಕೃಷ್ಣದೇವರಾಯ ವೃತ್ತ, ಮಲ್ಲಿಗಿ ಕ್ರಾಸ್‌, ಬಸ್‌ ಡಿಪೋ, ಬಳ್ಳಾರಿ ರಸ್ತೆ, ವಡಕರಾಯ ದೇವಸ್ಥಾನ, ಮೇನ್‌ ಬಜಾರ್‌, ಪಾದಗಟ್ಟೆ ಆಂಜನೇಯಸ್ವಾಮಿ ದೇವಸ್ಥಾನ, ಹೂವಿನ ಮಾರುಕಟ್ಟೆ, ಗಾಂಧಿ ಚೌಕ್‌, ಪುಣ್ಯಮೂರ್ತಿ ವೃತ್ತ, ಪುನೀತ್‌ ರಾಜ್‌ಕುಮಾರ ವೃತ್ತ, ಟೌನ್‌ ಪೊಲೀಸ್‌ ಠಾಣೆ ರಸ್ತೆ, ಹಳೇ ಉದ್ಯೋಗ ಪೆಟ್ರೋಲ್‌ ಬಂಕ್‌, ಮದಕರಿ ನಾಯಕ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ನೂರು ಹಾಸಿಗೆ ಆಸ್ಪತ್ರೆ, ಬಸವೇಶ್ವರ ವೃತ್ತ, ವಿಜಯನಗರ ಕಾಲೇಜ್‌, ಅಂಬೇಡ್ಕರ್‌ ವೃತ್ತ, ಡಾ. ಬಾಬುಜೀ ವೃತ್ತ, ಕನಕದಾಸ ವೃತ್ತ, ಕೋರ್ಟ್‌ ರಸ್ತೆ ಮೂಲಕ ನಗರದ ಬಿಜೆಪಿ ಕಚೇರಿ ವರೆಗೆ ಬೈಕ್‌ ರ‍್ಯಾಲಿ ಸಾಗಿ ಬಂದಿತು. ನಗರದಲ್ಲಿ ಸಾಗಿ ಬಂದ ಬೈಕ್‌ ರ್‍ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಜಯಘೋಷ ಮೊಳಗಿಸಿದರು.

ವಿಜಯನಗರ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗದಿಂದ ನೂರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲೆಡೆ ಮೋದಿ, ಮೋದಿ ಎಂಬ ಜಯಘೋಷ ಮೊಳಗಿತ್ತು. ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ಸ್ವೀಕಾರ ಸಮಾರಂಭದ ನೇರ ಪ್ರಸಾರಕ್ಕೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಸಿಹಿ ಹಂಚಿ ಸಂಭ್ರಮಾಚರಣೆ:

ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ನಗರದ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಸಿದ್ಧಿವಿನಾಯಕ, ವಡಕರಾಯ, ಭಟ್ರಹಳ್ಳಿ ಆಂಜನೇಯ, ಚಿತ್ತವಾಡ್ಗಿ ಅಂಜನೇಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅನಂತಶಯನ ಗುಡಿಯ ಪಂಡರಾಪುರ ಕಾಲನಿಗೆ ಭೇಟಿ ನೀಡಿ, ನಾಗರಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ಮುಖಂಡರಾದ ಐಯಾಳಿ ತಿಮ್ಮಪ್ಪ, ಅಶೋಕ್‌ ಜೀರೆ, ಪ್ರವೀಣ್‌, ಸೇರಿ ಕಾರ್ಯಕರ್ತರು ಇದ್ದರು.