ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದ ಪ್ರಧಾನಿಯಾಗಿ 3ನೇ ಬಾರಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಹಾಗೂ ಮಂಡ್ಯ ನೂತನ ಸಂಸದ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಸಂಜೆ 7.15ರ ವೇಳೆ ನಗರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸೇರಿದ ಮೈತ್ರಿ ಪಕ್ಷದ ನೂರಾರು ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರ ಜೈಕಾರ ಕೂಗುತ್ತಾ ಸಂಭ್ರಮ ವ್ಯಕ್ತಪಡಿಸಿದರು. ನಂತರ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು.
ದೇಗುಲದಲ್ಲಿ ಉರುಳು ಸೇವೆ:ಪ್ರಧಾನಿಯಾಗಿ 3ನೇ ಬಾರಿಗೆ ನರೇಂದ್ರ ಮೋದಿ ಅಧಿಕಾರ ಸ್ವೀಕಾರ ಹಾಗೂ ಸಚಿವ ಸಂಪುಟದಲ್ಲಿ ಸಂಸದ ಎಚ್ .ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗದ ಶ್ರೀಕಾಳಿಕಾಂಬ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಉರುಳು ಸೇವೆ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಡೆತಡೆಯಾಗದಂತೆ ದೈವಶಕ್ತಿ ತುಂಬಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಪೇಟೆ ಬೀದಿಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಲಾಡು ವಿತರಿಸಿ ಶುಭ ಕೋರಿದರು.ಈ ವೇಳೆ ಬಿಜೆಪಿ ಮುಖಂಡ ಹೊಸಹಳ್ಳಿ ಶಿವು,ಜೆಡಿಎಸ್ ಮುಖಂಡ ವಿಜಯ ಕುಮಾರ್ , ಭೀಮೇಶ್ , ಕೇಶವ, ಪ್ರಸನ್ನ,, ಹರೀಶ್ , ಬಾಬು ಸೇರಿದಂತೆ ಹಲವರು ಇದ್ದರು.
ರೋಗಿಗಳು, ಸಂಬಂಧಿಕರಿಗೆ ಅನ್ನದಾಸೋಹ:ನರೇಂದ್ರ ಮೋದಿ ಅವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ ಅವರು ನಗರದ ಮಿಮ್ಸ್ ಹೆರಿಗೆ ಆಸ್ಪತ್ರೆ ಬಳಿ ಮಮತೆಯ ಮಡಿಲು ವತಿಯಿಂದ ಅನ್ನದಾಸೋಹ ನಡೆಸಿದರು. ಬೆಳಗ್ಗೆ ಉಪಹಾರ ಗಂಜಿ, ಮಧ್ಯಾಹ್ನ ಮತ್ತು ರಾತ್ರಿ ಊಟ, ಹಣ್ಣಿನ ವ್ಯವಸ್ಥೆ ಮಾಡಿ ಪ್ರಧಾನಿ ನರೇಂದ್ರಮೋದಿ ಹಾಗೂ ಸಂಪುಟ ಸಹದ್ಯೋಗಿಗಳಿಗೆ ಶುಭ ಕೋರಿದರು.
ಜನರಿಗೆ ಸಿಹಿ ಹಂಚಿ ಸಂಭ್ರಮ:ಬಿಜೆಪಿ ಮುಖಂಡ ಎಚ್ .ಆರ್ .ಅರವಿಂದ್ ನೇತೃತ್ವದಲ್ಲಿ ನಗರದಲ್ಲಿ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಅರವಿಂದ್, ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ 10 ವರ್ಷದಿಂದ ಕೆಲಸ ಮಾಡಿದ್ದಾರೆ. 12 ವರ್ಷಗಳ ಕಾಲ ಗುಜರಾತ್ ನಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದರು.ಅತ್ಯಂತ ಬಹುಮತದೊಂದಿಗೆ ಮಂಡ್ಯ ಕ್ಷೇತ್ರದಿಂದ ಗೆದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೇಶದ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕೆಲಸ ಮಾಡಲಿ. ಎಚ್ಡಿಕೆ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಾರೆ. ಮಂಡ್ಯ ಜಿಲ್ಲೆಗೆ ವಿಶೇಷ ಸ್ಥಾನಮಾನಕ್ಕೆ ಚಿಂತನೆ ನಡೆಸಬೇಕು ಎಂದು ಕೋರಿದರು.
ಈ ವೇಳೆ ಹಲವು ಬಿಜೆಪಿ, ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.