ಸಾರಾಂಶ
ಧಾರವಾಡ ಸೇರಿ ರಾಜ್ಯದ ಐದು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳಲಿದ್ದು, ಎರಡು ದಿನಗಳಲ್ಲಿ ಸ್ಥಳ ಅಂತಿಮಗೊಳಿಸಲಾಗುವುದು.
ಹುಬ್ಬಳ್ಳಿ:
ಧಾರವಾಡ ಸೇರಿ ರಾಜ್ಯದ ಐದು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳಲಿದ್ದು, ಎರಡು ದಿನಗಳಲ್ಲಿ ಸ್ಥಳ ಅಂತಿಮಗೊಳಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿಗಳ ಪ್ರವಾಸ ಕುರಿತು ಭಾನುವಾರ ರಾತ್ರಿ ಮಾಹಿತಿ ಬಂದಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಧಾರವಾಡಕ್ಕೆ ಬಂದ ವೇಳೆ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದೆ ನ ಭುತೋ ನ ಭವಿಷ್ಯ ಎನ್ನುವಂತೆ ಬೃಹತ್ ರ್‍ಯಾಲಿ ನಡೆಸಿ ಯಶಸ್ವಿಗೊಳಿಸಲಾಗಿತ್ತು ಎಂದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ಸಂವಿಧಾನ ಬದಲಾವಣೆ ಕುರಿತು ಸಂಸದ ಅನಂತಕುಮಾರ ಹೇಳಿಕೆಗೆ ಉತ್ತರಿಸಿದ ಜೋಶಿ, ಈ ಕುರಿತು ಈಗಾಗಲೇ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.ವರಿಷ್ಠರ ತೀರ್ಮಾನವೇ ಅಂತಿಮ:
ಬಿಜೆಪಿ- ಜೆಡಿಎಸ್ ಮೈತ್ರಿಯಿಂದಾಗಿ ಇಬ್ಬರಿಗೂ ಲಾಭವಾಗಲಿದೆ. ಕೆಲವು ಕಡೆಗಳಲ್ಲಿ ಜೆಡಿಎಸ್ ಶಕ್ತಿಯುತವಾಗಿದೆ. ಕೆಲವು ಕಡೆಗಳಲ್ಲಿ ನಮ್ಮ ವೋಟ್ ಬ್ಯಾಂಕ್ ಇದೆ. ಮೈತ್ರಿಯೊಂದಿಗೆ 28 ಕ್ಷೇತ್ರಗಳಲ್ಲಿ ನಾವು ಗೆಲವು ಕಾಣಲಿದ್ದೇವೆ. ಜೆಡಿಎಸ್‌ಗೆ ಎಷ್ಟು ಟಿಕೆಟ್ ನೀಡಬೇಕು ಎಂಬುದರ ಕುರಿತು ಹಾಗೂ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ನೀಡಬೇಕೋ ಅಥವಾ ಯಾವ ಕ್ಷೇತ್ರ ನೀಡಬೇಕು ಎಂಬುದರ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾಣಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳೇ ಇಲ್ಲ:
ಎಲ್ಲ ಕಡೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಕಾಂಗ್ರೆಸ್ಸಿನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ. ಆದರೆ, ನಮ್ಮಲ್ಲಿ ಸ್ವಲ್ಪ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ಯಾರಲ್ಲಿಯೇ ಅಸಮಾಧಾನ ಉದ್ಭವಿಸಿದರೆ ವರಿಷ್ಠರು ಸಂಬಂಧಿಸಿದವರೊಂದಿಗೆ ಮಾತನಾಡಿ ಸಮಾಧಾನ ಮಾಡುತ್ತಾರೆ. ಒಟ್ಟಾರೆ ಜನತೆ ಮೋದಿಗೆ ಮತ ಹಾಕಲು ತೀರ್ಮಾನಿಸಿದ್ದಾರೆ ಎಂದರು.ನಾನು ಸಾಮಾನ್ಯ ಕಾರ್ಯಕರ್ತ:
ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಉತ್ತರಿಸಿದ ಜೋಶಿ. ಆ ತರಹ ಏನಿಲ್ಲ, ಸಂಸದರ ಕೆಲಸ, ಸಂಘಟನೆ, ಪಕ್ಷ ಸಂಘಟನೆ ಎಲ್ಲವನ್ನೂ ವರಿಷ್ಠರು ಗಮನಿಸಿ ಗಣನೆಗೆ ತಗೆದುಕೊಳ್ಳುತ್ತಾರೆ. ಇಂತಹ ಹೇಳಿಕೆಗಳಿಗೆ ಉತ್ತರ ನೀಡಲು ನಾನು ರಾಷ್ಟ್ರೀಯ ನಾಯಕ ಅಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೆ ಎಂದು ಉತ್ತರಿಸಿದರು.19ರಂದು ಹುಬ್ಬಳ್ಳಿಗೆ ಮೋದಿಪ್ರಧಾನಿ ನರೇಂದ್ರ ಮೋದಿ ಮಾ. 19ರಂದು ಹುಬ್ಬಳ್ಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಹೊಸ ಗಬ್ಬೂರಿನಲ್ಲಿ ಸೋಮವಾರ ಶಾಸಕ ಮಹೇಶ ಟೆಂಗಿನಕಾಯಿ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಧಾರವಾಡ ಲೋಕಸಭೆಯ ಸಂಚಾಲಕ ಎಂ. ನಾಗರಾಜ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಸಂತೋಷ್ ಚೌಹಾಣ ಸೇರಿದಂತೆ ಹಲವರಿದ್ದರು.