ಡುಪಿ ಕೃಷ್ಣಮಠಕ್ಕೆ ನ.28ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಂದರ್ಭದಲ್ಲಿ ದಾರಿಯುದ್ಧಕ್ಕೂ ತುಳುನಾಡಿನ ಜಾನಪದರ್ಟ್ಸ್ ಶೈಲಿಯಲ್ಲಿ ಸ್ವಾಗತ ನೀಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ: ಉಡುಪಿ ಕೃಷ್ಣಮಠಕ್ಕೆ ನ.28ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಂದರ್ಭದಲ್ಲಿ ದಾರಿಯುದ್ಧಕ್ಕೂ ತುಳುನಾಡಿನ ಜಾನಪದ ಕಲೆ, ಹುಲಿ ವೇಷ ಕುಣಿತ, ಯಕ್ಷಗಾನ, ಡೊಳ್ಳು ಕುಣಿತ ಇತ್ಯಾದಿ ಸಂಪ್ರದಾಯ ಕಲೆಗಳ ಪ್ರದರ್ಶನ ನಡೆಯಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಉಡುಪಿ ಭೇಟಿಯ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಜಿಲ್ಲೆಗೆ ಪ್ರಧಾನಿ ಭೇಟಿ ನೀಡಲಿರುವ ಹಿನ್ನೆಲೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ದೊರಕಲಿದೆ, ಆದ್ದರಿಂದ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಬೇಕು, ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂದು ಮಣಿಪಾಲ, ಮಲ್ಪೆ ಹಾಗೂ ಉಡುಪಿ ನಗರ ವ್ಯಾಪ್ತಿಯ ಮಕ್ಕಳಿಗೆ ರಜೆ ನೀಡಬೇಕು, ಗಣ್ಯ ವ್ಯಕ್ತಿಗಳಿಗೆ, ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪಾಸ್ ವಿತರಣೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಪ್ರಧಾನಿ ಅವರು ಸಂಚರಿಸುವ ಮಾರ್ಗದಲ್ಲಿ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು. ಆದಿಉಡುಪಿ ಹೆಲಿಪ್ಯಾಡಿನಿಂದ ಕೃಷ್ಣ ಮಠದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್, ಪೊಲೀಸರನ್ನು ನಿಯೋಜಿಸಬೇಕು. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಯಾವುದೇ ಬ್ಯಾಗ್, ನೀರಿನ ಬಾಟೆಲ್, ಧ್ವಜ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದ್ದು, ಈ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಿರಬೇಕು ಎಂದರು.ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳುಉಪಸ್ಥಿತರಿದ್ದರು.