ಮೋದಿ 10 ವರ್ಷ ಸಾಧನೆ ತೋರಿಸಿದ್ರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

| Published : May 06 2024, 12:30 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ತಮ್ಮ 10 ವರ್ಷಗಳ ಅಧಿಕಾರ ಅವಧಿಯಲ್ಲಿ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

- ಪ್ರಧಾನಿ ನರೇಂದ್ರ ಮೋದಿಗೆ ಪಂಥಾಹ್ವಾನ ನೀಡಿದ ಸಿಎಂ । ಹೊನ್ನಾಳಿಯಲ್ಲಿ ಪ್ರಜಾಧ್ವನಿ ಸಮಾವೇಶ-2 ಕಾರ್ಯಕ್ರಮ

- 4 ಅವಧಿಗೆ ಸಂಸದರಾದ ಸಿದ್ದೇಶ್ವರ ಅಸಮರ್ಥರೆಂಬ ಕಾರಣಕ್ಕೆ ಕೇಂದ್ರ ಮಂತ್ರಿ ಪದವಿ ಕಳೆದುಕೊಂಡರು: ವಾಗ್ದಾಳಿ - - -

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಪ್ರಧಾನಿ ನರೇಂದ್ರ ಮೋದಿ ತಮ್ಮ 10 ವರ್ಷಗಳ ಅಧಿಕಾರ ಅವಧಿಯಲ್ಲಿ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಹೊನ್ನಾಳಿಯಲ್ಲಿ ಭಾನುವಾರ ಪ್ರಜಾಧ್ವನಿ ಸಮಾವೇಶ-2 ಉದ್ಘಾಟಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ತಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯ ಹತ್ತು ಜನೋಪಯೋಗ ಕೆಲಸಗಳನ್ನು ತೋರಿಸಲಿ ನೋಡೋಣ ಎಂದರು.

ಮೋದಿ ಸರ್ಕಾರವನ್ನು ನಾನು ಟೀಕೆ ಮಾಡಿದ್ದಕ್ಕೆ ನನ್ನನ್ನು ನೋಡಿದ ತಕ್ಷಣ ಯುವಕರು ಮೋದಿ ಮೋದಿ ಮೋದಿ ಅಂತಾ ಕೂಗುತ್ತಾರೆ. ಹಾಗೆಲ್ಲಾ ಕೂಗುವವರಿಗೆ ಕೆಲಸ ಕೊಡಿ ಅಂತಾ ಹೇಳಿದರೆ, ಪಕೋಡ ಮಾರಾಟ ಮಾಡಿ ಎಂದು ಮೋದಿ ಹೇಳುತ್ತಾರೆ. ಇಂತಹ ಮೋದಿ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಹಸಿಸುಳ್ಳು ಘೋಷಣೆ ಮಾಡಿದ್ದರು ಎಂದು ಕುಟುಕಿದರು.

ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ನಾನು ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯ, ಯೋಜನೆಗಳು, ಭಾಗ್ಯಗಳ ಪಟ್ಟಿ ಸಮೇತ ನಾನು ಸಾಧನೆ ಮುಂದಿಡುತ್ತೇನೆ. ನೀವು ಪ್ರಧಾನಿಯಾಗಿ 10 ವರ್ಷದಲ್ಲಿ ಮಾಡಿದ ಸಾಧನೆಗಳ ಪಟ್ಟಿಯನ್ನು ನಿಮಗೆ ತಾಕತ್ತಿದ್ದರೆ ಸಮಸ್ತ ಭಾರತೀಯರ ಮುಂದೆ ಹೇಳಿ ನೋಡೋಣ ಎಂದರು.

ನರೇಂದ್ರ ಮೋದಿ ಸಾಧನೆಗಳ ಪಟ್ಟಿ ಮಾಡಬೇಕೆಂದರೆ ಮೋದಿ ಹೇಳಿದ ಸುಳ್ಳುಗಳ ಪಟ್ಟಿ ಮಾಡಬಹುದಷ್ಟೇ. ಭಾರತೀಯರಿಗೆ ಹಾಕಿದ ಮೂರು ನಾಮಗಳ ಪಟ್ಟಿ ಮಾಡಬಹುದು. ಕನ್ನಡಿಗರ ಕೈಗೆ ಕೊಟ್ಟ ಖಾಲಿ ಚೊಂಬುಗಳ ಪಟ್ಟಿ ಮಾಡಬಹುದು. ಮೋದಿ ಹತ್ತು ವರ್ಷದಲ್ಲಿ ಸುಳ್ಳುಗಳನ್ನು ಹೇಳಿದ್ದನ್ನು ಬಿಟ್ಟರೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಟಿಎ, ಡಿಎ ಪಡೆಯಲು ಕಳಿಸಿದ್ದರಾ?:

ದಾವಣಗೆರೆ ಲೋಕಸಭಾ ಕ್ಷೇತ್ರದ ಪರವಾಗಿ, ರಾಜ್ಯದ ಪರವಾಗಿ ಒಂದೇ ಒಂದು ದಿನವೂ ಲೋಕಸಭೆಯಲ್ಲಿ ಇಲ್ಲಿನ ಸಂಸದ ಜಿ.ಎಂ.ಸಿದ್ದೇಶ್ವರ ಬಾಯಿ ಬಿಡಲಿಲ್ಲ. ದಾವಣಗೆರೆ ಕ್ಷೇತ್ರ, ಹೊನ್ನಾಳಿ ತಾಲೂಕಿನ ಸಮಸ್ಯೆ ಬಗ್ಗೆ ಕೇಂದ್ರದ ಬಳಿ ಚರ್ಚಿಸಲಿಲ್ಲ. ಹಾಗಾಗಿ, ನೀವು ನೀಡಿದ ಮತಕ್ಕೆ ಬೆಲೆ ಬರಲಿಲ್ಲ. ಕೇವಲ ಶೋಕಿ ಮಾಡುವುದಕ್ಕೆ, ಟಿಎ, ಡಿಎ ಪಡೆಯುವುದಕ್ಕೆ ಸಿದ್ದೇಶ್ವರಗೆ ದಾವಣಗೆರೆ ಸಂಸದರಾಗಿ ಕಳಿಸಿದ್ದರಾ ಎಂದು ಕಿಡಿಕಾರಿದರು.

ಮೋದಿ ಸರ್ಕಾರವು ರಾಜ್ಯಕ್ಕೆ ಆರ್ಥಿಕವಾಗಿ ತೀವ್ರ ಅನ್ಯಾಯ ಮಾಡಿತು. ತೀವ್ರ ಬರಗಾಲ ಬಂದಾಗ, ಅತಿವೃಷ್ಟಿ, ನೆರೆ, ಪ್ರವಾಹ ಬಂದಾಗಲೂ ರಾಜ್ಯಕ್ಕೆ ಅನ್ಯಾಯ ಮಾಡಲಾಯಿತು. ಆಗಲೂ ಸಿದ್ದೇಶ್ವರ ಬಾಯಿ ಬಿಡಲಿಲ್ಲ. ಮತ್ತೆ ಇಂತಹವರನ್ನು ಲೋಕಸಭೆಗೆ ಸದಸ್ಯರಾಗಿ ಕಳಿಸಿದ್ದಿರಿ. 4 ಅವಧಿಗೆ ಸಂಸದರಾದ ಸಿದ್ದೇಶ್ವರ ಅಸಮರ್ಥರೆಂಬ ಕಾರಣಕ್ಕೆ ಕೇಂದ್ರ ಮಂತ್ರಿ ಪದವಿ ಕಳೆದುಕೊಂಡರು. ಸಂಸದರಾಗಿ ಸದನದಲ್ಲಿ ಒಮ್ಮೆಯೂ ಸಿದ್ದೇಶ್ವರ ಮಾತನಾಡಲಿಲ್ಲ. ಪತಿಯೇ ಮಾತನಾಡಿಲ್ಲವೆಂದರೆ ಇನ್ನು ಪತ್ನಿ ಗಾಯತ್ರಿ ಸಿದ್ದೇಶ್ವರ ಲೋಕಸಭೆಯಲ್ಲಿ ಏನು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಈಗಾಗಲೇ ಸೋತಾಗಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ. ದಾವಣಗೆರೆಯಲ್ಲಿ ಯಾವುದೇ ಕಾರಣಕ್ಕೂ ಗಾಯತ್ರಿ ಸಿದ್ದೇಶ್ವರ ಗೆಲ್ಲುವುದಿಲ್ಲ. ಬಿಜೆಪಿ ಕುಮ್ಮಕ್ಕಿನಿಂದ ಪಕ್ಷೇತರನಾಗಿ ಸ್ಪರ್ಧಿಸಿರುವ ಜಿ.ಬಿ. ವಿನಯಕುಮಾರಗೆ ಒಂದೇ ಒಂದು ಮತವನ್ನೂ ಹಾಕಬೇಡಿ. ವಿನಯ್‌ಗೆ ಬೀಳುವ ಪ್ರತಿಯೊಂದು ಮತವೂ ಬಿಜೆಪಿಗೆ ಬಿದ್ದಂತೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದರ ನನಗೆ ಶಕ್ತಿ ಬರುತ್ತದೆ. ಹಾಗಾಗಿ ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಹೊನ್ನಾಳಿ ಕ್ಷೇತ್ರದ ಡಿ.ಜಿ.ಶಾಂತನಗೌಡ ಹಿರಿಯ ಶಾಸಕರು, ನಮ್ಮ ಪಕ್ಷದ ಹಿರಿಯ ಮುಖಂಡರು, ಶಿಸ್ತಿನ ಸಿಪಾಯಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶಾಂತನಗೌಡರಿಗೆ ಒಳ್ಳೆಯ ಹುದ್ದೆ ಸಿಗಲಿದೆ. ರಾಜ್ಯದಲ್ಲಿ ಶೇ.7ರಷ್ಟು ಇರುವ ಕುರುಬ ಸಮಾಜಕ್ಕೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಕುರುಬರಿಗೆ ಟಿಕೆಟ್ ಕೊಟ್ಟಿಲ್ಲವೆಂದು ನಿಮಗ್ಯಾರಿಗೂ ಸಿಟ್ಟು ಬರುವುದಿಲ್ಲವೇ ಎಂಬು ಹೊನ್ನಾಳಿ ಕ್ಷೇತ್ರದ ಪ್ರಬಲ ಸಮುದಾಯಗಳಲ್ಲೊಂದು ಕುರುಬ ಜಾತಿಯವರಿಗೆ ಭಾವನಾತ್ಮಕವಾಗಿ ಅವರು ಸೆಳೆಯಲೆತ್ನಿಸಿದರು.

ಕುರುಬರಿಗೆ ಟಿಕೆಟ್‌ ನೀಡದ ಬಿಜೆಪಿ:

ರಾಜ್ಯದಲ್ಲಿ ಶೇ.7ರಷ್ಟು ಇರುವ ಕುರುಬ ಸಮಾಜಕ್ಕೆ ಬಿಜೆಪಿ ಟಿಕೆಟ್ ನೀಡಲಿಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಜಿ.ಬಿ. ವಿನಯಕುಮಾರಗೆ ದುಡ್ಡು ಕೊಟ್ಟು, ಬಿಜೆಪಿಯವರೇ ನಿಲ್ಲಿಸಿದ್ದಾರೆ. ಕುರುಬ ಸಮುದಾಯದ ಮುಖ್ಯಮಂತ್ರಿ ನಾನು ಬೇಕಾ ಅಥವಾ ಮತ್ತೊಬ್ಬರ ಸೇವಕನಾಗಿರುವ ವಿನಯಕುಮಾರ ಬೇಕಾ? ವಿನಯನಿಗೆ ನೀವು ಮತ ಹಾಕಿದರೆ, ಅದು ಬಿಜೆಪಿಗೆ ಮತ ನೀಡಿದಂತಾಗುತ್ತದೆ. ದಯವಿಟ್ಟು ಆ ಕೆಲಸ ಮಾತ್ರ ಮಾಡಬೇಡಿ. ಬಿಜೆಪಿಯವರು ಸೋಲುವುದು ಗ್ಯಾರಂಟಿ. ಮೋದಿ ಯಾವುದೇ ಕಾರಣಕ್ಕೂ ಮತ್ತೆ ಪ್ರಧಾನಿಯಾಗಲ್ಲ. ಗಾಯತ್ರಿ ಸಿದ್ದೇಶ್ವರ ಸಹ ಇಲ್ಲಿ ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಸಚಿವ ಶಂಕರ ಇತರರು ಇದ್ದರು.

- - - ಕೋಟ್‌

ರಾಜ್ಯದ 1.21 ಲಕ್ಷ ಮಹಿಳೆಯರಿಗೆ ತಿಂಗಳಿಗೆ ₹2 ಸಾವಿರ ರು. ಬರುತ್ತಿದ್ದು, ನಿಮ್ಮ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ಮಹಿಳೆಯರು ಪೂಜೆ ಮಾಡಿಸುತ್ತಿದ್ದಾರೆ ಎಂಬುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮಗೆ ಪತ್ರ ಬರೆದಿದ್ದರು. ಬರೀ ಮೋಸವನ್ನೇ ಮಾಡಿದ ಬಿಜೆಪಿಗೆ ಓಟು ಹಾಕಬೇಕಾ ಅಥವಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾಗೆ ಮತ ನೀಡಬೇಕಾ ಆಲೋಚಿಸಿ

- ಸಿದ್ದರಾಮಯ್ಯ, ಮುಖ್ಯಮಂತ್ರಿ

- - - ಬಾಕ್ಸ್‌

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹5300 ಕೋಟಿ ಘೋಷಣೆಯಾಯಿತು. ಬಸವರಾಜ್ ಬೊಮ್ಮಾಯಿ ಸಹ ಬಜೆಟ್ ನಲ್ಲಿ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದರು. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ‌ ಕೊಡಲಿಲ್ಲ. ಎನ್‌ಡಿಆರ್‌ಎಫ್‌ ಕಾನೂನಿನಂತೆ ನಮಗೆ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೆವು. ಆದರೆ, ಕೇಂದ್ರ ಕೊಟ್ಟಿದ್ದು ಕಡಿಮೆ. ನಮ್ಮ ರಾಜ್ಯದ 27 ಸಂಸದರು ಒಬ್ಬರೂ ಏನನ್ನೂ ಮಾತನಾಡಲಿಲ್ಲ. ಡಿ.ಕೆ.ಸುರೇಶ ಒಬ್ಬ ಬಿಟ್ಟರೆ ಉಳಿದ ರಾಜ್ಯದ ಸಂಸದರು ಕೋಲೆ ಬಸವನಂತೆ ತಲೆಹಾಕಿದರು. ನಿಮ್ಮ ಸಂಸದರು ಟಿಎ, ಡಿಎ ಕ್ಲೇಮ್ ಮಾಡೋಕಷ್ಟೇ ನೀವು ಆಯ್ಕೆ ಮಾಡಿ ಕಳಿಸಿದ್ದಾ? ಈ ಸಲ ಮಾತ್ರ ಬಿಜೆಪಿಗೆ ವೋಟು ಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

- - - -ಫೋಟೋ ಇದೆ.