ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಹಾಗೂ ಕಳೆದ 25 ವರ್ಷಗಳ ಅವರ ಸುದೀರ್ಘ ಸಾರ್ವಜನಿಕ ಸೇವೆಯು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ಆರ್ಥಿಕ ಮತ್ತು ಸ್ವಾವಲಂಬಿ ಶಕ್ತಿಯನ್ನಾಗಿ ರೂಪಿಸಿದೆ.

ವಿಕಸಿತ ಭಾರತ ಸಂಕಲ್ಪ ಸೇವಾಜ್ಯೋತಿ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ

ಕನ್ನಡಪ್ರಭ ವಾರ್ತೆ ಗದಗ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಹಾಗೂ ಕಳೆದ 25 ವರ್ಷಗಳ ಅವರ ಸುದೀರ್ಘ ಸಾರ್ವಜನಿಕ ಸೇವೆಯು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ಆರ್ಥಿಕ ಮತ್ತು ಸ್ವಾವಲಂಬಿ ಶಕ್ತಿಯನ್ನಾಗಿ ರೂಪಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬುಧವಾರ ಗದಗ ​ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸೇವಾಜ್ಯೋತಿ ಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಅವರು, 2014 ರಿಂದ ದೇಶದ ಪ್ರಧಾನಿಯಾಗಿ ಒಟ್ಟು 25 ವರ್ಷಗಳ ಕಾಲ ಸಂವಿಧಾನಿಕ ಹುದ್ದೆಗಳಲ್ಲಿ ಅವಿರತ ಸೇವೆ ಸಲ್ಲಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಂತೆ, ಸೆ. 17ರಿಂದ ಅ. 17ರವರೆಗೆ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಹಾಗೂ ಸೇವಾ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇಶದ ಎಲ್ಲ ಜಿಲ್ಲೆಗಳಲ್ಲೂ ಈ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಾಗತಿಕ ಯುದ್ಧದ ಸನ್ನಿವೇಶಗಳು ಹಾಗೂ ಕೋವಿಡ್‌ನಂತಹ ಸಂಕಷ್ಟಗಳ ನಡುವೆಯೂ ಭಾರತವು ಆರ್ಥಿಕವಾಗಿ ಬಲಿಷ್ಠ ಹೆಜ್ಜೆಗಳನ್ನು ಇರಿಸಿದೆ. ಹಿಂದೆ ಶಸ್ತ್ರಾಸ್ತ್ರ ಆಮದಿನ ಮೇಲೆ ಅವಲಂಬಿತವಾಗಿದ್ದ ಭಾರತ, ಇಂದು ಮೇಕ್ ಇನ್ ಇಂಡಿಯಾ ಮೂಲಕ ವಾರ್ಷಿಕ ₹35ರಿಂದ 40 ಸಾವಿರ ಕೋಟಿ ಮೊತ್ತದ ರಕ್ಷಣಾ ಸಾಧನಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದೆ. ಯುವ ಸಮೂಹದ ಕೌಶಲ್ಯಾಭಿವೃದ್ಧಿ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನೀಡಿದ ಉತ್ತೇಜನವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆಗೆ ಜೀರೋ ಟಾಲರೆನ್ಸ್ ನೀತಿ ಅನುಸರಿಸಲಾಗಿದೆ. ನಕ್ಸಲ್ ಚಟುವಟಿಕೆಗಳನ್ನು ಬುಡಸಮೇತ ಕಿತ್ತೊಗೆಯುವ ಮೂಲಕ ಆಂತರಿಕ ಭದ್ರತೆಯನ್ನು ಭದ್ರಪಡಿಸಲಾಗಿದೆ. ​ತಮ್ಮ ತಾಯಿಯ ನಿಧನದ ದಿನದಂದೇ ಅಂತ್ಯಕ್ರಿಯೆ ಮುಗಿಸಿ ಕರ್ತವ್ಯಕ್ಕೆ ಮರಳಿದ ನರೇಂದ್ರ ಮೋದಿಯವರ ಕರ್ತವ್ಯನಿಷ್ಠೆ ದೇಶದ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದರು.

2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವನ್ನಾಗಿ ರೂಪಿಸಲು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಪ್ರಧಾನಿಗಳ ಮಾತಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕರು ಮಾತನಾಡಿದರು. ನಂತರ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬೃಹತ್ ಪರದೆಯ ಮೇಲೆ ವೀಕ್ಷಿಸಿದರು. ಅಲ್ಲಿಂದ ಜ್ಯೋತಿ ಯಾತ್ರೆಯು ಅವಳಿ ನಗರದಲ್ಲಿ ಸಂಚರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಸಹಪ್ರಭಾರಿ ಭೋಜರಾಜ್, ಮುಖಂಡರಾದ ಅನಿಲ ಮೆಣಸಿನಕಾಯಿ, ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ, ರವಿ ದಂಡಿನ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.