ತೈಲವರ್ಣದಲ್ಲಿ ಮೋದಿ ಚಿತ್ರ: ಕಲಾವಿದ ಕಿರಣ್‌ಗೆ ಮೋದಿ ಪತ್ರ

| Published : Apr 20 2024, 01:08 AM IST

ಸಾರಾಂಶ

‘ಮೋದಿ ಅವರು ಚಿತ್ರವನ್ನು ಪಡೆದುಕೊಂಡಾಗಲೇ ನಾನು ನನ್ನನ್ನು ಮರೆತಿದ್ದೆ. ಈಗ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಅವರ ಹಸ್ತಾಕ್ಷರ ಇರುವ ಪತ್ರವನ್ನು ಕಳುಹಿಸಿದ್ದಾರೆ. ಹೀಗೆಲ್ಲ ಆಗುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ. ಇದು ನನ್ನ ಭಾಗ್ಯ'’ ಎಂದು ಕಲಾವಿದ ಕಿರಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತೈಲವರ್ಣದಲ್ಲಿ ರಚಿಸಿದ ವ್ಯಕ್ತಿ ಚಿತ್ರವನ್ನು ಮಂಗಳೂರಿನ ರೋಡ್ ಶೋದಲ್ಲಿ ಕಾಣಿಕೆಯಾಗಿ ನೀಡಿದ್ದ ಕಲಾವಿದ ಕಿರಣ್ ತೊಕ್ಕೊಟ್ಟು ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಇ ಮೇಲ್ ಮೂಲಕ ಅಭಿನಂದನಾ ಪತ್ರ ಬಂದಿದೆ.

ಕಳೆದ ಭಾನುವಾರ ಮಂಗಳೂರಿನಲ್ಲಿ ನಡೆದ ರೋಡ್ ಶೋದಲ್ಲಿ ಮೋದಿ ಅವರ ತೈಲವರ್ಣದ ಚಿತ್ರವನ್ನು ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿದ್ದ ಕಿರಣ್ ಅವರಿಂದ ಭದ್ರತಾ ಸಿಬ್ಬಂದಿ ಮೂಲಕ ಮೋದಿ ಅವರು ಚಿತ್ರ ಪಡೆದುಕೊಂಡಿದ್ದರು. ಬುಧವಾರ ಸಂಜೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಇ ಮೇಲ್ ಐಡಿ ಮತ್ತು ವಿಳಾಸ ಪಡೆದುಕೊಂಡು ಮೇಲ್ ಕಳುಹಿಸಲಾಗಿದೆ. ಮೋದಿ ಅವರ ಸಹಿ ಇರುವ ಪತ್ರದಲ್ಲಿ ಕಿರಣ್ ಅವರ ಪ್ರತಿಭೆಯನ್ನು ಅಭಿನಂದಿಸಲಾಗಿದೆ.‘ಅತ್ಯುತ್ತಮ ಕೌಶಲ್ಯದಿಂದ ತಾವು ರಚಿಸಿದ ಚಿತ್ರ ದೇಶದ ಯುವಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಪ್ರಗತಿಪರ ಭಾರತವನ್ನು ನಿರ್ಮಿಸಲು ಮತ್ತು ಯುವಜನರಿಗೆ ಪ್ರಗತಿಪರ ಭವಿಷ್ಯವನ್ನು ನೀಡಲು ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಅಭಿಮಾನದ ಕಾಣಿಕೆಯು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ದೇಶಕ್ಕಾಗಿ ಇನ್ನಷ್ಟು ಹೆಚ್ಚು ಶ್ರಮದಿಂದ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ’ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.‘೨೦೪೭ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಭವಿಷ್ಯ ಯುವಶಕ್ತಿಯ ಕೈಯಲ್ಲಿ ಭದ್ರವಾಗಿರುತ್ತದೆ ಎಂಬುದರ ಬಗ್ಗೆ ಸಂದೇಹವೇ ಬೇಡ ಎನ್ನುವುದನ್ನು ನಿಮ್ಮಂಥ ಉತ್ಸಾಹಿಗಳು ಸಾಬೀತು ಮಾಡಿದ್ದಾರೆ. ಭಾವನೆಗಳಿಗೆ ಇನ್ನಷ್ಟು ಬಣ್ಣ ತುಂಬಲು ನಿಮಗೆ ಸಾಧ್ಯವಾಗಲಿ, ಒಳಿತಾಗಲಿ’ ಎಂದು ಮೋದಿ ಹೇಳಿದ್ದಾರೆ.‘ಮೋದಿ ಅವರು ಚಿತ್ರವನ್ನು ಪಡೆದುಕೊಂಡಾಗಲೇ ನಾನು ನನ್ನನ್ನು ಮರೆತಿದ್ದೆ. ಈಗ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಅವರ ಹಸ್ತಾಕ್ಷರ ಇರುವ ಪತ್ರವನ್ನು ಕಳುಹಿಸಿದ್ದಾರೆ. ಹೀಗೆಲ್ಲ ಆಗುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ. ಇದು ನನ್ನ ಭಾಗ್ಯ''’ ಎಂದು ಕಲಾವಿದ ಕಿರಣ್ ತಿಳಿಸಿದ್ದಾರೆ.