ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಫಿಯೋನೆಕ್ಸ್ ಎಫ್‌ಸಿ ಸೋಮವಾರಪೇಟೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 6+3 ಆಟಗಾರರನ್ನೊಳಗೊಂಡಂತೆ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿತು.ಫೈನಲ್ ಪಂದ್ಯದಲ್ಲಿ ಫಿಯೋನೆಕ್ಸ್ ಎಫ್‌ಸಿ ಸೋಮವಾರಪೇಟೆ ಮತ್ತು ಮೊಗೇರ ಎಫ್‌ಸಿ ಪಾಲಿಬೆಟ್ಟ ತಂಡಗಳು ಪೂರ್ಣಾವಧಿಯಲ್ಲಿ ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಫಿಯೋನೆಕ್ಸ್ ಎಫ್‌ಸಿ ತಂಡ ಗೆಲುವು ಸಾಧಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮೊಗೇರ ಎಫ್‌ಸಿ ಪಾಲಿಬೆಟ್ಟ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫಿಯೋನೆಕ್ಸ್ ಎಫ್‌ಸಿ ಸೋಮವಾರಪೇಟೆ ಹಾಗೂ ಮಾನ್ವಿಕ್ ಎಫ್‌ಸಿ ತಂಡದ ನಡುವೆ ನಡೆಯಿತು. ಫಿಯೋನೆಕ್ಸ್ ಎಫ್‌ಸಿ ಸೋಮವಾರಪೇಟೆ ತಂಡವು ಪ್ರಶಾಂತ್ ಅವರ ಹ್ಯಾಟ್ರಿಕ್ ಗೋಲ್‌ನಿಂದ ಮಾನ್ವಿಕ್ ಎಫ್‌ಸಿ ವಿರುದ್ಧ ಜಯಗಳಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.
ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮೊಗೇರ ಎಫ್‌ಸಿ ಪಾಲಿಬೆಟ್ಟ ಹಾಗೂ ಇಶಾನಿ ಎಫ್‌ಸಿ ಗೋಣಿಕೊಪ್ಪ ಪೂರ್ಣಾವಧಿಯಲ್ಲಿ ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೊಲುಗಳ ಮೂಲಕ ಮೊಗೇರ ಎಫ್‌ಸಿ ತಂಡವು ಜಯ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಇಶಾನಿ ಎಫ್‌ಸಿ ಗೋಣಿಕೊಪ್ಪ ತಂಡ, ಮಾನ್ವಿಕ್ ಎಫ್‌ಸಿ ತಂಡವನ್ನು 6-5 ಗೋಲುಗಳಿಂದ ಮಣಿಸಿತು. ಪೂರ್ಣಾವಧಿಯಲ್ಲಿ ಇತ್ತಂಡಗಳು ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಇತ್ತಂಡಗಳು 5-5 ಗೋಲುಗಳ ಸಮಬಲ ಸಾಧಿಸಿ, ಸಡನ್ ಡೆತ್‌ನಲ್ಲಿ 1-0 ಗೋಲುಗಳಿಂದ ಮಣಿಸಿ ಇಶಾನಿ ಎಫ್‌ಸಿ ಗೋಣಿಕೊಪ್ಪ ತೃತೀಯ ಸ್ಥಾನ ಪಡೆದುಕೊಂಡಿತು.* ಬಾಲಕಿಯರ ವಿಭಾಗದಲ್ಲಿ ಸುಂಟಿಕೊಪ್ಪ ತಂಡ ಚಾಂಪಿಯನ್:ಮಹಿಳೆಯರ 2 ತಂಡಗಳ ನಡುವಿನ ಪಂದ್ಯದಲ್ಲಿ ಟೀಂ ಸುಂಟಿಕೊಪ್ಪ ತಂಡ, ಟೀಂ ಮಡಿಕೇರಿ ತಂಡವನ್ನು ಸೋಲಿಸಿತು. ಪೂರ್ಣಾವಧಿಯಲ್ಲಿ ಈ ತಂಡಗಳು 1-1 ಗೋಲು ದಾಖಲಿಸಿ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 1-1 ಮತ್ತೊಮ್ಮೆ ಸಮಬಲ ಸಾಧಿಸಿತು. ಸಡನ್ ಡೆತ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಟೀಂ ಸುಂಟಿಕೊಪ್ಪ ತಂಡ, ಟೀಂ ಮಡಿಕೇರಿ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿತು. ಮಡಿಕೇರಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಕ್ರೀಡಾಕೂಟದ ತೀರ್ಪುಗಾರರಾಗಿ ಲೋಹಿತ್ (ಪಿಕ) ದಿವಾಕರ, ಬಿಬ್ಲ ಕಾರ್ಯ ನಿರ್ವಹಿಸಿದ್ದರು.ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಫಿಯೋನೆಕ್ಸ್ ತಂಡದ ಪ್ರಶಾಂತ್ ಪಡೆದು ಕೊಂಡರೆ, ಬೆಸ್ಟ್ ಗೋಲ್ ಕೀಪರ್ ಆಗಿ ಟೀಂ ಹಂಟರ್ಸ್ ತಂಡದ ರಮೇಶ್ ಪ್ರಶಸ್ತಿ ಪಡೆದುಕೊಂಡರು. ಬೆಸ್ಟ್ ಡಿಫೆಂಡರ್ ಆಗಿ ಇಶಾನಿ ಎಫ್‌ಸಿ ತಂಡದ ದಿನೇಶ್ ಆಯ್ಕೆಯಾದರು. ಉದಾಯೋನ್ಮೋಖ ಆಟಗಾರನಾಗಿ ಹಂಟರ್ಸ್ ತಂಡದ ಚಂಪಕ್, ಅತ್ಯಧಿಕ ಸ್ಕೋರ್ ಮೊಗೇರ ಎಫ್‌ಸಿ ತಂಡದ ಪಿಟ್ಟಿ ಪ್ರವೀಣ್ ಬಹುಮಾನ ಪಡೆದರೆ, ಶಿಸ್ತುಬದ್ಧ ತಂಡವಾಗಿ ಮಾನ್ವಿಕ್ ಎಫ್‌ಸಿ ಅಮ್ಮತಿ ಪಡೆದು ಕೊಂಡಿತು.* ಸಮಾರೋಪ ಸಮಾರಂಭ
ಕೊಡಗು ಮೊಗೇರ ಫುಟ್ಬಾಲ್ ಕ್ಲಬ್‌ನ ಕ್ರೀಡಾ ಕಾರ್ಯದರ್ಶಿ ವಿವೇಕ್ ಮೊಗೇರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆ.ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಬಹುಮಾನ ದಾನಿ ಗಣೇಶ್ ಹೊಸುರು, ಕೊಡಗು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಜನಾರ್ದನ ಮರಗೋಡು, ಸಮಾಜದ ಗೌರವ ಸಲಹೆಗಾರ ಪಿ.ಎಂ.ರವಿ, ಶಕ್ತಿ ದಿನ ಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್, ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಂ.ಎಂ.ಅಶೋಕ್ ಹಾಗೂ ಕ್ಲಬ್‌ನ ಪದಾಧಿಕಾರಿಗಳು ರಮೇಶ್ ಪಿ. ಸಿ., ದರ್ಶಿತ್ ಹೆಬ್ಬಟ್ಟಗೇರಿ, ದಿನೇಶ್ ಮಡಿಕೇರಿ, ವಿವೇಕ್ ಕಡಗದಾಳು, ಸುರೇಶ್ ಎಂ. ಕೆ., ದಿನೇಶ್ ಪಿ.ಎನ್. ಹಾಗೂ ರಕ್ಷಿತಾ ಪಾಲ್ಗೊಂಡಿದ್ದರು.ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪಂದ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮುಂದಿನ ವರ್ಷ ಇದೇ ರೀತಿ ಬೆಂಬಲ ದೊರೆತಲ್ಲಿ ರಾಜ್ಯಮಟ್ಟದ ಪಂದ್ಯ ನಡೆಸಲು ತೀರ್ಮಾನ ಕೈ ಕೊಂಡಿದ್ದೇವೆ.। ಅಶೋಕ್ ಎಂ.ಎಂ., ಅಧ್ಯಕ್ಷ ಕೊಡಗು ಮೊಗೇರ ಫುಟ್ಬಾಲ್ ಕ್ಲಬ್