ಸಾರಾಂಶ
ಯಾವುದೇ ಹಬ್ಬ ಹರಿದಿನಗಳು ಬಂದರೂ ಎಲ್ಲರೂ ಒಂದಾಗಿ ಆಚರಿಸುತ್ತಾ ಬಂದಿದ್ದಾರೆ
ಮುಂಡರಗಿ: ಪುರಸಭೆ ಸಿಬ್ಬಂದಿಯಿಂದ ಗಾಂಧಿ ಭವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ವಿಘ್ನವಿನಾಶಕ ಗಣಪತಿಗೆ ಐದನೇ ದಿನವಾದ ಬುಧವಾರ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಪಟ್ಟಣದ 19ನೇ ವಾರ್ಡಿನ ಸದಸ್ಯ ಮಹ್ಮದ್ ರಫೀಕ್ ಮುಲ್ಲಾ ಕರ್ಪೂರ ಹಚ್ಚಿದ ಕಾಯಿ ಹಿಡಿದುಕೊಂಡು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮರೆದಿದ್ದಾರೆ.
ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಹಾಗೂ ಗದುಗಿನ ತೋಂಟದಾರ್ಯ ಸ್ವಾಮಿಜಿಯವರು ನಡೆದಾಡಿದ ಪುಣ್ಯಭೂಮಿ. ಇಲ್ಲಿ ಜಾತಿ, ಮತ, ಭೇದವಿಲ್ಲ. ಪಕ್ಷ, ಪಂಗಡಗಳಿಲ್ಲ. ಯಾವುದೇ ಹಬ್ಬ ಹರಿದಿನಗಳು ಬಂದರೂ ಎಲ್ಲರೂ ಒಂದಾಗಿ ಆಚರಿಸುತ್ತಾ ಬಂದಿದ್ದಾರೆ.ಪುರಸಭೆಯಿಂದ ಐದನೇ ದಿನ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಮಹಾ ಪ್ರಸಾದದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹಾಗೂ ಸದಸ್ಯ ಮಹ್ಮದ್ ರಫೀಕ್ ಮುಲ್ಲಾ ಮಧ್ಯಾಹ್ನದ ಪೂಜಾ ಕಾರ್ಯದಲ್ಲಿ ತೊಡಗಿಕೊಂಡು ನಂತರ ಎಲ್ಲರಿಗೂ ಮಹಾ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಪ್ರಹ್ಲಾದ ಹೊಸಮನಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ರಜನೀಕಾಂತ ದೇಸಾಯಿ, ರಾಜು ಡಾವಣಗೇರಿ, ಸಿದ್ದಲಿಂಗಪ್ಪ ದೇಸಾಯಿ, ಅಡಿವೆಪ್ಪ ಛಲವಾದಿ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹಾಗೂ ಪುರಸಭೆ ಸರ್ವ ಸಿಬ್ಬಂದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.