ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಪ್ರಾಪಂಚಿಕ, ಸಾಂಸ್ಕೃತಿಕ, ರಾಷ್ಟ್ರೀಯತೆಯನ್ನು ಬೆಳೆಸುವ ಮನಸ್ಸು ಮೋಹನ ಆಳ್ವರಲ್ಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಕಾರ್ಕಳ ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಡಾ. ಎಂ.ಮೋಹನ್ ಆಳ್ವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಹನ್ ಆಳ್ವರನ್ನು ಮಹಾನ್ ಆಳ್ವ ಎಂದು ಕರೆದರು ತಪ್ಪಲ್ಲ, ಎಲ್ಲ ಧರ್ಮಗಳನ್ನು ಪ್ರೀತಿಸುವ ವ್ಯಕ್ತಿತ್ವ ಮೋಹನ್ ಆಳ್ವರದ್ದಾಗಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ, ಹುಟ್ಟುಹಬ್ಬ ಅಚರಿಸಿದವನು ನಾನಲ್ಲ. ಬದುಕಿನ ದಾಖಲೆಗಳನ್ನು ದಾಖಲೀಕರಣ ಮಾಡಿದವನು ನಾನಲ್ಲ. ಜಾತಿ ಮತ ಎಲ್ಲವನ್ನೂಗೌರವಿಸಿಕೊಂಡು, ಮೌಲ್ಯಾಧಾರಿತ ಬದುಕಿಗೆ ಒತ್ತುಕೊಟ್ಟ ಬದುಕು ನನ್ನದು. ನನ್ನದು ಹಳ್ಳಿಯ ಜನಪದ ಕಲಾವಿದ ಇದ್ದಹಾಗೆ, ಮಡಿವಂತಿಕೆ ಎಂಬುದಿಲ್ಲ. ನನ್ನದು ಹಾಗೂ ಜ್ಞಾನಸುಧಾ ಕಾಲೇಜಿನ ಸುಧಾಕರ ಶೆಟ್ಟಿ ಅವರ ಸಂಬಂಧ ಅನ್ಯೋನ್ಯತೆಯ ಗೆಳೆತನದ ಸಂಕೇತವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಮಾತನಾಡಿ, ಮೋಹನ ಆಳ್ವ ಹಾಗೂ ನನ್ನ ಗೆಳೆತನ ದಶಕಗಳ ಸಂಬಂಧವಾಗಿದೆ. ಅವರು ಕಷ್ಟ, ಸುಖಗಳನ್ನು ಸಮಾನವಾಗಿ ಪ್ರೀತಿಸಿದ ವ್ಯಕ್ತಿ ಎಂದರು.ಸ್ಕೌಟ್- ಗೈಡ್ಸ್ ರಾಜ್ಯ ಅಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಮೋಹನ್ ಆಳ್ವ ಪವಾಡ ಪುರುಷ. ಸಮಯ ಪ್ರಜ್ಞೆಗೆ ಒತ್ತು ನೀಡುವ ವ್ಯಕ್ತಿ ಎಂದು ಹೇಳಿದರು.
ಶಾಸಕ ವಿ. ಸುನಿಲ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ನಾಡು, ನುಡಿ, ರಾಷ್ಟ್ರೀಯತೆ ಸಂಸ್ಕೃತಿ ಸೇರಿದಂತೆ ಸಮಾಜದ ಎಲ್ಲ ರಂಗದಲ್ಲಿ ಸವ್ಯಸಾಚಿಯಾಗಿ ಮೋಹನ ಆಳ್ವರು ಕಾಣಿಸಿಕೊಳ್ಳುತಿದ್ದಾರೆ. ಹಿರಿಯರಿಗೆ ಪ್ರಬುದ್ಧರಾಗಿ, ಮಕ್ಕಳಿಗೆ ಮಕ್ಕಳಾಗಿ ಕಾಣುವ ಅವರ ಮನಸ್ಸು ಬಲು ಹಿರಿದು. ಸಮಾಜದ ಮೇಲ್ಪಂಕ್ತಿಯಲ್ಲಿ ಕಾಣಿಸುವ ವ್ಯಕ್ತಿತ್ವ ಮೋಹನ ಆಳ್ವರದ್ದಾಗಿದೆ. ಹಿಂದಿನ ಸರ್ಕಾರಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತಿದ್ದರು ಎಂದು ತಿಳಿಸಿದರು.ಆಳ್ವರ ಹುಟ್ಟುಹಬ್ಬದ ಪ್ರಯುಕ್ತ ಅನಾರೋಗ್ಯದಿಂದ ಬಳಲುತ್ತಿರುವ 10 ಮಂದಿ ಹಾಗೂ 5 ಸಮಾಜ ಸೇವಾ ಸಂಸ್ಥೆಗಳಿಗೆ ತಲಾ 10 ಸಾವಿರ ರು.ನಂತೆ ಆರ್ಥಿಕ ನೆರವನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಯಿತು.
ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳ ಶುಶ್ರೂಷೆಗಾಗಿ 2 ಲಕ್ಷ ರು. ಸಹಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀಪತಿ ಭಟ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಶರತ್ ಆಚಾರ್ಯ ಪ್ರಾರ್ಥಿಸಿದರು. ಶಿಕ್ಷಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.