ಅಂಕೋಲಾ ತಾಲೂಕಿನ ಅವರ್ಸಾದ ತಾರಿಬೊಳೆಯ ಮೋಹನ ನಾಯ್ಕ ಅವರ 11ನೇ ನಾಟಕ ಕೃತಿ ‘ಧರ್ಮ ರಕ್ಷಕ’ ಜ.3ರಂದು ಅಂಕೋಲಾದಲ್ಲಿ ಲೋಕಾರ್ಪಣೆಯಾಗಲಿದೆ. ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ ಮೋಹನ ನಾಯ್ಕ, ನಾಟಕಗಳ ಹಿನ್ನೆಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ಶಾಲೆಯ ಮೆಟ್ಟಿಲು ಏರದೆಯೇ ಸಾಹಿತ್ಯದ ಶಿಖರ ಸ್ಪರ್ಶಿಸಿದ ಅಪರೂಪದ ಸಾಧಕನ ಕಥೆಯಿದು. ಅನಕ್ಷರಸ್ಥನಾಗಿದ್ದರೂ, 11 ನಾಟಕ ಕೃತಿಗಳನ್ನು ಸಮಾಜಕ್ಕೆ ಅರ್ಪಿಸಿ ರಂಗಭೂಮಿಯ ಲೋಕದಲ್ಲಿ ತನ್ನದೇ ಆದ ಗುರುತು ಮೂಡಿಸಿದವರು ಮೋಹನ ನಾಯ್ಕ. ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಮಕ್ಕಳ ನೆರವಿನಿಂದ ಅಕ್ಷರ ರೂಪ ನೀಡಿದ ಈ ಧೀಮಂತ ಕಲಾವಿದರ 11ನೇ ನಾಟಕ ಕೃತಿ ‘ಧರ್ಮ ರಕ್ಷಕ’ ಜ.3ರಂದು ಲೋಕಾರ್ಪಣೆಗೊಳ್ಳುತ್ತಿದೆ.

ಅವರ್ಸಾದ ತಾರಿಬೊಳೆಯ ಮೋಹನ ನಾಯ್ಕ ಅವರ ಬದುಕು ಬಡತನದ ಕಠಿಣ ಪಾಠಗಳಿಂದಲೇ ರೂಪುಗೊಂಡದ್ದು. ಆರ್ಥಿಕ ಸಂಕಷ್ಟದಿಂದ ಶಾಲೆ ದೂರವಾದರೂ, ಬದುಕು ಅವರಿಗೆ ಬೇರೆ ದಾರಿಯನ್ನು ತೋರಿಸಿತು. ಕೇವಲ 14ನೇ ವಯಸ್ಸಿನಿಂದಲೇ ಯಕ್ಷಗಾನ, ಸಂಗ್ಯಾ-ಬಾಳ್ಯಾ ಮತ್ತು ನಾಟಕಗಳಲ್ಲಿ ಅಭಿನಯ ಆರಂಭಿಸಿದ ಅವರು, ಅನುಭವವನ್ನೇ ಗುರು ಮಾಡಿಕೊಂಡು ಸಾಹಿತ್ಯ ಲೋಕಕ್ಕೆ ಕಾಲಿಟ್ಟರು.

ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ ಮೋಹನ ನಾಯ್ಕ, ನಾಟಕಗಳ ಹಿನ್ನೆಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದು, 6 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ರಂಗಭೂಮಿಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಅಂಕಲಿಪಿಯಿಂದ ಅಕ್ಷರ ಲೋಕದವರೆಗೆ: ಶಾಲಾ ಶಿಕ್ಷಣವಿಲ್ಲದಿದ್ದರೂ, ತಾವು ಬರೆದ ನಾಟಕಗಳನ್ನು ಅಕ್ಷರ ರೂಪದಲ್ಲಿ ಕಾಣಬೇಕೆಂಬ ಕನಸು ಮೋಹನ ನಾಯ್ಕ ಅವರ ಮನಸ್ಸಿನಲ್ಲಿ ಸದಾ ಜೀವಂತವಾಗಿತ್ತು. ನೂರಾರು ನಾಟಕಗಳನ್ನು ವೀಕ್ಷಿಸಿ ಪ್ರೇರಣೆಗೆ ಒಳಗಾದ ಅವರು, ರೇಡಿಯೋ ಹಾಗೂ ದೂರದರ್ಶನದ ಮೂಲಕ ತಮ್ಮ ಸಾಹಿತ್ಯಾಭಿರುಚಿ ಬೆಳೆಸಿಕೊಂಡರು.

1981ರಲ್ಲಿ ಪುಸ್ತಕ ಭಂಡಾರಕ್ಕೆ ತೆರಳಿ ಅಂಕಲಿಪಿ ಖರೀದಿಸಿದ ಅವರು, ಸ್ವಯಂ ಅಭ್ಯಾಸದ ಮೂಲಕ ಅಕ್ಷರ ಓದುವ ಹಾಗೂ ಬರೆಯುವ ಮಟ್ಟಕ್ಕೆ ತಲುಪಿದರು. ಮನಸ್ಸಿಗೆ ಬಂದ ಭಾವನೆಗಳನ್ನು ಅಸ್ಪಷ್ಟ ಅಕ್ಷರಗಳಲ್ಲಿ ಬರೆದುಕೊಳ್ಳುತ್ತಿದ್ದ ಮೋಹನ ನಾಯ್ಕ ಅವರ ಆಲೋಚನೆಗಳಿಗೆ ಮಕ್ಕಳಾದ ಸಂಜಯ ಮತ್ತು ಸಚಿನ್ ಶುದ್ಧ ಅಕ್ಷರ ರೂಪ ನೀಡಿ, ತಂದೆಯ ಸಾಹಿತ್ಯ ಯಾತ್ರೆಗೆ ಭದ್ರ ನೆಲೆ ಒದಗಿಸಿದ್ದಾರೆ.

ಸಮಾಜಮುಖಿ ಸಂದೇಶ: ಮೋಹನ ನಾಯ್ಕಅವರ ಸಾಹಿತ್ಯದಲ್ಲಿ ಸಮಾಜದ ಕಳಕಳಿ ಸ್ಪಷ್ಟವಾಗಿ ಕಾಣಿಸುತ್ತದೆ. 1984ರಿಂದ ನಾಟಕ ರಚನೆ ಆರಂಭಿಸಿದ ಅವರು ಸ್ವಾರ್ಥದ ಸುಳಿಯಲ್ಲಿ, ಸರ್ಪ ಸಿಂಧೂರ, ಸಿಡಿದೆದ್ದ ನಾರಿ ಬಿದ್ದಳು ಜಾರಿ, ಕುಡುಕ ಕಟ್ಟಿದ ಮತ್ಯುಪಾಶ, ಮತ್ತೆ ಬಂದ ಪೂರ್ಣಚಂದ್ರ, ಕಿಚ್ಚು ಹಚ್ಚಿದ ಕಿರಾತಕರು, ಬಂಗಾರದಂಥ ಮಗ, ಧನವಂತ ಹೆಣ್ಣಿನ ಸೊಕ್ಕು ಮುರಿದ ಗುಣವಂತ, ಕರಳು ಬಳ್ಳಿ ಹಾವಾಯಿತು, ಅಣ್ಣ ಕೊಟ್ಟ ಉಡುಗೊರೆ ಹಾಗೂ ಇದೀಗ ಧರ್ಮ ರಕ್ಷಕ ಕೃತಿಗಳ ಮೂಲಕ ರಂಗಭೂಮಿಯ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಸಾಹಿತ್ಯ ಮಾದರಿ: ಸಾಹಿತ್ಯ ಎನ್ನುವುದು ವಿದ್ಯಾರ್ಹತೆಯ ಹಂಗಿನಲ್ಲಿಲ್ಲ. ಅದು ಸೃಜನಶೀಲತೆಯ ತುಡಿತದಲ್ಲಿದೆ ಎಂಬುದನ್ನು ಮೋಹನ ನಾಯ್ಕ ಅವರು ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ. ಯುವ ಸಮುದಾಯಕ್ಕೆ ಪ್ರೇರಣೆಯಾಗುವಂತಹ ಅವರ ಸಮಾಜಮುಖಿ ಸಾಹಿತ್ಯ ಮಾದರಿ ಎಂದು ಲೇಖಕ ವಿಘ್ನೇಶ್ವರ ಗುನಗಾ ಹೇಳಿದರು.

ರಂಗಭೂಮಿಯ ಮೇಲಿನ ಅಪಾರ ಪ್ರೀತಿಯೇ ನನಗೆ ಏನಾದರೂ ಸಾಧಿಸಬೇಕೆಂಬ ಛಲ ನೀಡಿತು. 11 ಕೃತಿಗಳಲ್ಲಿ 6 ಕೃತಿ ಪುಸ್ತಕವಾಗಿ ಮುದ್ರಣ ಕಂಡಿದ್ದು, 5 ಕೃತಿ ಹಸ್ತಪ್ರತಿಗಳಾಗಿವೆ. ನನ್ನ ಕೃತಿಗಳನ್ನು ಪ್ರೇಕ್ಷಕರು ಸ್ವೀಕರಿಸಿರುವುದು ನನಗೆ ಅತ್ಯಂತ ಸಂತೋಷ ಎಂದು ನಾಟಕ ಲೇಖಕ ಮೋಹನ ನಾಯ್ಕ ಹೇಳಿದರು.