ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಬಿತ್ತುವ ಜತೆಗೆ ಶೈಕ್ಷಣಿಕ ಪ್ರಗತಿಗೆ ಮಠಗಳು ಸಹಕಾರಿಯಾಗಿವೆ ಎಂದು ಬೆಳಗಾವಿ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀಶಿವಲಿಂಗೇಶ್ವರ ಮಹಾಸ್ವಾಮೀಜಿ ಹೇಳಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಶಾಲಾ-ಕಾಲೇಜು ವಾರ್ಷಿಕೋತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇಶ ಅಜ್ಞಾನದ ಕತ್ತಲಲ್ಲಿ ಮುಳುಗಿದ್ದ ವೇಳೆ ಮಠ, ಮಂದಿರಗಳು ಶಿಕ್ಷಣ, ಸಂಸ್ಕೃತಿ, ಸಂಸ್ಕಾರದ ಜ್ಞಾನ ನೀಡಿ ಸಮಾಜವನ್ನು ಜ್ಞಾನದೆಡೆಗೆ ತರುವ ಕೆಲಸ ಮಾಡಿವೆ ಎಂದರು.
ಆದಿಚುಂಚನಗಿರಿ ಮಠವು ಸಮಾಜಕ್ಕೆ ಶಿಕ್ಷಣ, ದಾಸೋಹ, ಸಂಸ್ಕಾರ ಮೂಡಿಸುವ ಕೆಲಸ ಮಾಡುತ್ತಿದೆ. ರಾಜ್ಯ, ದೇಶ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಶಿಕ್ಷಣ ಸಂಸ್ಥೆಯನ್ನು ತೆರೆದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.ಚಿತ್ರನಟ ದರ್ಶನ್ ಮಾತನಾಡಿ, ಬಿಜಿಎಸ್‌ಗೂ ನಮಗೂ ಅವಿನಾಭಾವ ಸಂಬಂಧವಿದೆ. ಬಿಜಿಎಸ್‌ನಲ್ಲಿ ಯಾವುದೇ ಕಾರ್‍ಯಕ್ರಮವಾದರೂ ನನ್ನ ಉಪಸ್ಥಿತಿ ಇರುತ್ತದೆ. ಇದಕ್ಕೆಲ್ಲ ನನಗೆ ಮಠದ ಮೇಲಿರುವ ಅತಿಯಾದ ಪ್ರೀತಿಯೇ ಕಾರಣ ಎಂದರು.
ಬಾಲ್ಯದಿಂದ 10ನೇ ತರಗತಿಯವರೆಗೆ ಮಾತ್ರ ಮಕ್ಕಳು, ವಿದ್ಯಾರ್ಥಿ ಜೀವನವನ್ನು ಅನುಭವಿಸುತ್ತಾರೆ. ಬಳಿಕ ಜೀವನದಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಸಂಬಳ ಎಂಬ ಸಾಕಷ್ಟು ಸಂಕೋಲೆಗಳು ಶುರುವಾಗುತ್ತವೆ ಎಂದು ಹೇಳಿದರು.ನಾನು ಸಹ ಬಾಲ್ಯದ ಜೀವನನ್ನು ಸಂತಸದಿಂದ ಅನುಭವಿಸಿದ್ದೇನೆ. ಇದೀಗ ಒತ್ತಡದಲ್ಲಿಯೇ ಜೀವನ ಕಳೆಯುತ್ತಿದ್ದೇನೆ. ನಾನು ಏನೂ ಮಾಡಲಿಲ್ಲ ಎಂದರೂ ಪೊಲೀಸ್ ಕೇಸ್, ಕೋರ್ಟ್ ಎಂಬ ಹಲವು ಒತ್ತಡಗಳು ಎದುರಾಗುತ್ತಿವೆ ಎಂದರು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರುತ್ತಿದೆ. ಎಲ್ಲರೂ ಚನ್ನಾಗಿ ಓದಿ ಪರೀಕ್ಷೆ ಬರೆಯಿರಿ. ತಂದೆ-ತಾಯಂದಿರು ತುಂಬಾ ಪ್ರೀತಿಯಿಂದ ಬೆಳೆಸುತ್ತಾರೆ, ಅವರಿಗೆ ನೋವುಂಟಾಗುವ ಕೆಲಸ ಮಾಡಬೇಡಿ,ತಂದೆ-ತಾಯಿಯ ಘನತೆ, ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಿ, ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.ಪತ್ರಕರ್ತ ರೆಹಮತ್ ಕಂಚಿಕಾರ್ ಮಾತನಾಡಿದರು. ಚಿತ್ರನಟ ದರ್ಶನ್ ಸೇರಿ ಗಣ್ಯರು ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಬಿಜಿಎಸ್ ಕ್ಯಾಲೆಂಡರ್, ಬಿಜಿಎಸ್ ಡೇರಿ ಹಾಗೂ ಬಿಜಿಎಸ್ ಚಿಣ್ಣರ ಕುಂಚ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಶಾಲಾ-ಕಾಲೇಜು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್‍ಯಕ್ರಮ ನಡೆಯಿತು, ತಮ್ಮ ಮಕ್ಕಳ ನೃತ್ಯ ಪ್ರದರ್ಶನ ಕಂಡು ಪೋಷಕರು, ಸಾರ್ವಜನಿಕರು ಶಿಳ್ಳೆ,ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಸಮಾರಂಭದಲ್ಲಿ ಶಾಲೆಯ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಚಿತ್ರನಟ ಜೈ ಜಗದೀಶ್, ನಟಿ ವಿಜಯಲಕ್ಷ್ಮೀಸಿಂಗ್, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ಬಿಇಓ ಬಿ.ಚಂದ್ರಶೇಖರ್ ಸೇರಿದಂತೆ ಶಾಲಾ-ಕಾಲೇಜು ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.---------------
20ಕೆಎಂಎನ್ ಡಿ15, 16ಪಾಂಡವಪುರ ಬಿಜಿಎಸ್ ಶಾಲಾ-ಕಾಲೇಜು ವಾರ್ಷಿಕೋತ್ಸವದಲ್ಲಿ ಚಿತ್ರನಟ ದರ್ಶನ್ ಸೇರಿ ಹಲವು ಗಣ್ಯರು ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
---ಪಾಂಡವಪುರ ಬಿಜಿಎಸ್ ಶಾಲಾ-ಕಾಲೇಜು ವಾರ್ಷಿಕೋತ್ಸವದಲ್ಲಿ ಚಿತ್ರನಟ ದರ್ಶನ್ ಅವರನ್ನು ಅಭಿನಂದಿಸಲಾಯಿತು.