ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.ಪಟ್ಟಣದ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಚಾಲುಕ್ಯ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುಮಾರು 40 ವರ್ಷಗಳಿಂದಲೂ ಕೂಡ ರಾಜ್ಯದ ಹಲವು ಭಾಗದಲ್ಲಿ ಸಾಮಾಜಿಕ ಸೇವೆಯನ್ನು ಮಾಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಪ್ರತಿ ಗ್ರಾಮಗಳಲ್ಲಿಯೂ ಕೂಡ ಸ್ವಸಹಾಯ ಸಂಘಗಳನ್ನು ಮಾಡುವ ಮೂಲಕ ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ಶಿಕ್ಷಣ ಉದ್ಯೋಗ, ಆರೋಗ್ಯ ಸೇರಿದಂತೆ ಎಲ್ಲ ರೀತಿಯ ವಿಚಾರಗಳನ್ನು ತಿಳಿಸುವ ಮೂಲಕ ಜನರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.ಚಾಲುಕ್ಯ ಆಸ್ಪತ್ರೆಯ ನಿರ್ದೇಶಕಿ ಡಾ.ರಶ್ಮಿ ಮಾತನಾಡಿ, ಗ್ರಾಮಾಂತರ ಭಾಗದ ಜನರಿಗೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವಂತಹ ಸಾರ್ವಜನಿಕರಿಗೆ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂಬ ಹಿನ್ನೆಲೆಯಲ್ಲಿ ಚಾಲುಕ್ಯ ಆಸ್ಪತ್ರೆಯೂ ಇಂತಹ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇಂತಹ ಆರೋಗ್ಯ ಶಿಬಿರಗಳನ್ನು ಮಾಡುತ್ತಿರುವುದರಿಂದ ಸಾವಿರಾರು ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜೊತೆಯಲ್ಲಿ ಸದಾಕಾಲ ಚಾಲುಕ್ಯ ಆಸ್ಪತ್ರೆಯೂ ಅವರ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಶಿವಕುಮಾರ್, ಶ್ವೇತಾ, ತಾಲೂಕು ಯೋಜನಾಧಿಕಾರಿ ರಾಜೇಶ್, ವೈದ್ಯರಾದ, ಡಾ.ಮಹಾಲಕ್ಷ್ಮಿ, ಡಾ.ರಂಜಿತಾ, ಡಾ.ಪ್ರಿಯಾಂಕ, ಒಕ್ಕೂಟದ ಅಧ್ಯಕ್ಷ ಗಂಗಮ್ಮ, ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಆಗಮಿಸಿ ಚಿಕಿತ್ಸೆಯನ್ನು ಪಡೆದರು.