ತಿಂಡಿ ಪ್ರಿಯರ ಮನಗೆದ್ದ ಹಲಸು ಮೇಳ

| Published : Jun 30 2024, 12:48 AM IST

ಸಾರಾಂಶ

ನೂರೆಂಟು ಬಗೆಯ ಹಲಸು ಹಾಗೂ ಹಲಸಿನ ಬೀಜದ ಖಾದ್ಯ, ಹಲಸಿನ ವಿವಿಧ ತಿಂಡಿಗಳು, ಮಲೆನಾಡಿನ ವಿವಿಧ ತಳಿಯ ಗಿಡಗಳಿಂದ ಮೇಳ ಬಹಳ ಆಕರ್ಷಣೀಯವಾಗಿತ್ತು.

ಕನ್ನಡಪ್ರಭ ವಾರ್ತೆ ಶಿರಸಿ

ನೂರೆಂಟು ಬಗೆಯ ಹಲಸು ಹಾಗೂ ಹಲಸಿನ ಬೀಜದ ಖಾದ್ಯ, ಹಲಸಿನ ವಿವಿಧ ತಿಂಡಿಗಳು, ಮಲೆನಾಡಿನ ವಿವಿಧ ತಳಿಯ ಗಿಡಗಳಿಂದ ಮೇಳ ಬಹಳ ಆಕರ್ಷಣೀಯವಾಗಿತ್ತು.

ದೂರದೂರ ಹಳ್ಳಿಗಳಿಂದ ಆಗಮಿಸಿದ ಖಾದ್ಯ ಪ್ರಿಯರು ತಮಗಿಷ್ಟವಾದ ತಿಂಡಿ ಖರೀದಿಸುತ್ತಿರುವುದು ಒಂದೆಡೆಯಾದರೆ, ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕೈತೋಟದಲ್ಲಿ ತೋರಿದ ಕೈಚಳಕದಿಂದ ಬೆಳೆಸಿದ ಗಿಡಗಳ ಮಾರಾಟ ಬಲು ಜೋರಾಗಿತ್ತು. ಇದು ಕಂಡುಬಂದಿರುವುದು ನಗರದ ಎಪಿಎಂಸಿ ಆವಾರದಲ್ಲಿರುವ ನೆಲಸಿರಿ ಆರ್ಗ್ಯಾನಿಕ ಹಬ್‌ನಲ್ಲಿ.

ತೋಟಗಾರಿಕಾ ಇಲಾಖೆ, ಜೀವ ವೈವಿಧ್ಯ ಮಂಡಳಿ, ತಾಲೂಕು ಪಂಚಾಯತ್, ಉತ್ತರಕನ್ನಡ ಸಾವಯವ ಒಕ್ಕೂಟ ಮತ್ತು ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನ ಆಯೋಜಿದ್ದ ಹಲಸು ಮತ್ತು ಮಲೆನಾಡು ಮೇಳದಲ್ಲಿ ನೂರಾರು ಮಹಿಳೆಯರು, ಖಾದ್ಯ ಪ್ರಿಯರು ಖರೀದಿಸಿ, ಖುಷಿಪಟ್ಟರು.

ವಿಶೇಷವಾಗಿ ಹಲಸಿನ ಕ್ಯಾಂಟೀನ್ ಪ್ರಮುಖ ಜನಾಕರ್ಷಣೆಯಾಗಿತ್ತು. ಹಲಸು ಹಾಗೂ ಹಲಸಿನ ಬೀಜದ ಖಾದ್ಯ ಸ್ಪರ್ಧೆ ಹಾಗೂ ಹಲಸಿನ ವಿವಿಧ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ, ಮಲೆನಾಡಿನ ವಿವಿಧ ತಳಿಯ ಗಿಡಗಳ ಮಾರಾಟ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ನಡೆಯಿತು. ವನಸ್ತ್ರೀ ಸಂಸ್ಥೆಯ ಸಾಂಪ್ರದಾಯಿಕ ತರಕಾರಿ ಬೀಜ ಸಂರಕ್ಷಕರಿಂದ ನಾಟಿ ತರಕಾರಿ ಬೀಜಗಳ ಪ್ರದರ್ಶನ ಹಾಗೂ ಮಾರಾಟ ಬಲು ಜೋರಾಗಿತ್ತು. ರೈತರು ಬೆಳೆದ ಹಲಸಿನ ವಿವಿಧ ಬಗೆಯ ತಳಿ ಹಾಗೂ ಹಣ್ಣುಗಳನ್ನು ತಂದು ಮಾರಾಟ ಮಾಡಿದರು. ಸೆಲ್ಕೋ ಫೌಂಡೇಶನ್ ವತಿಯಿಂದ ಸೌರಶಕ್ತಿ ಚಾಲಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರ್ಯಾತ್ಯಕ್ಷಿಕೆ ಮೂಲಕ ಮೇಳಕ್ಕೆ ಆಗಮಿಸಿದ ಜನರಿಗೆ ತಿಳಿಸಿದರು.

ಮೇಳವನ್ನು ಉದ್ಘಾಟಿಸಿ, ಜೀವ ವೈವಿಧ್ಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿರುವ ಹಲಸಿನ ಅಧ್ಯಯನ ನಾಡಿಗೆ ಮಾದರಿಯಾಗಿದ್ದು, ಆಯುಷ್ ಇಲಾಖೆಯು ಹಲಸಿನ ಬೀಜ ಪೌಷ್ಟಿಕ ಎಂಬುದನ್ನು ಸಂಶೋಧಿಸಿ, ಜನರಿಗೆ ತಿಳಿಸಬೇಕು. ಹಲಸಿನ ಮೇಳವು ೨೦೦೮ರಿಂದ ಪ್ರಾರಂಭವಾಗಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮೇಳ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಪಶು ಆಹಾರದಲ್ಲಿ ಹಲಸು ಬಳಸುವುದು ಹೇಗೆ ಎಂಬ ಪ್ರಯೋಗಗಳು ನಡೆದಿದೆ. ಮೌಲವರ್ಧನೆ ಬಗ್ಗೆ ಹೆಚ್ಚು ಲಕ್ಷ್ಯವಹಿಸಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮಾತನಾಡಿ, ತಮಿಳುನಾಡಿನಲ್ಲಿ ಪ್ರತಿಯೊಬ್ಬ ರೈತರು ಹಲಸಿನ ಉತ್ಪನ್ನಗಳಿಂದ ಜೀವನ ಸಾಗಿಸುತ್ತಾರೆ. ಅದು ನಮಗೆ ಪ್ರೇರಣೆಯಾಗಿದೆ. ಹಲಸಿನ ವಸ್ತುಗಳನ್ನು ಸಂಸ್ಕರಣೆ ಮಾಡುತ್ತಿರುವರನ್ನು ಪ್ರೋತ್ಸಾಹಿಸುವ ಕೆಲಸ ತೋಟಗಾರಿಕಾ ಇಲಾಖೆಯಿಂದ ಮಾಡುತ್ತಿದ್ದೇವೆ. ಹಲಸು ಹೊಸ ಹೊಸ ಉದ್ಯಮಿಗಳನ್ನು ಸೃಷ್ಟಿ ಮಾಡುವಂತೆ ನಾವು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಗಣೇಶ ಹೆಗಡೆ, ವನಸ್ತ್ರಿ ಸಂಸ್ಥೆಯ ಟ್ರಸ್ಟಿ ಶೈಲಜಾ ಗೋರನಮನೆ, ಉತ್ತರಕನ್ನಡ ಸಾವಯವ ಒಕ್ಕೂಟದ ಉಪಾಧ್ಯಕ್ಷ ಡಾ. ವೆಂಕಟೇಶ್ ನಾಯ್ಕ, ಸೆಲ್ಕೋ ಫೌಂಡೇಶನ್ ಪ್ರೋಗ್ರಾಮ್ ಮ್ಯಾನೇಜರ್ ಪ್ರಕಾಶ ಮೇಟಿ ಮತ್ತಿತರರು ಉಪಸ್ಥಿತರಿದ್ದರು.

ಕೆವಿಕೆ ವಿಸ್ತರಣಾಧಿಕಾರಿ ರೂಪಾ ಪಾಟೀಲ, ಬೆಂಗಳೂರಿನ ರಾ ಗ್ರ್ಯಾನ್ಯೂಲಸ್ ಹಾಗೂ ತಂಬುಳಿಮನೆ ಸಂಸ್ಥಾಪಕ ಕಾರ್ತಿಕ ಶ್ರೀಧರ ವಿಚಾರ ಸಂಕಿರಣದಲ್ಲಿ ಉಪಯುಕ್ತ ಮಾಹಿತಿ ನೀಡಿದರು. ನಿರ್ದೇಶಕ ರಾಘವ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವನಸ್ತ್ರೀ ಸಂಸ್ಥೆಯ ಸದಸ್ಯರಾದ ಹೇಮಾ ಮತ್ತು ನಂದನಾ ಪ್ರಾರ್ಥಿಸಿದರು. ವಿಕಾಸ ಹೆಗಡೆ ನಿರೂಪಿಸಿದರು.

ಇಂದು ಸಮಾರೋಪ

ಇಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಾಗಲಕೋಟೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಹೆಗಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ಉತ್ತರಕನ್ನಡ ಸಾವಯವ ಒಕ್ಕೂಟದ ಉಪಾಧ್ಯಕ್ಷ ಡಾ. ವೆಂಕಟೇಶ್ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೆಲ್ಕೋ ಫೌಂಡೇಶನ್ ಪ್ರೋಗ್ರಾಮ್ ಮ್ಯಾನೇಜರ್ ಪ್ರಕಾಶ ಮೇಟಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲಸಿನ ಖಾದ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆಅಭಿವೃದ್ಧಿ ಮಂಡಳಿ ಬರಲಿ

ಮಲೆನಾಡಿಗೆ ಹಲಸು ಜೀವವೈವಿದ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಲಸು ಅಭಿವೃದ್ಧಿ ಮಂಡಳಿ ಮಾಡಲು ಸರ್ಕಾರ ಚಿಂತನೆ ಮಾಡಬೇಕು.

ಅನಂತ ಹೆಗಡೆ ಅಶೀಸರ, ಜೀವ ವೈವಿದ್ಯ ಮಂಡಳಿ ಮಾಜಿ ಅಧ್ಯಕ್ಷ