ಜಿಲ್ಲಾಮಟ್ಟದ ಉದ್ಯೋಗ ಮೇಳದ ಉದ್ಘಾಟನೆ ಇಂದು

| Published : Jun 30 2024, 12:48 AM IST

ಜಿಲ್ಲಾಮಟ್ಟದ ಉದ್ಯೋಗ ಮೇಳದ ಉದ್ಘಾಟನೆ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳ 58 ಕಂಪನಿಗಳು ಮೇಳಕ್ಕೆ ಬರಲಿದ್ದು ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಪತ್ರ ನೀಡಲಿದ್ದಾರೆ.

ಧಾರವಾಡ:

ವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ನೇತೃತ್ವದ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರವು ಇಲ್ಲಿಯ ಕೆ.ಇ. ಬೋರ್ಡ್ ಕಾಲೇಜು, ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆಯ ಸಹಕಾರದೊಂದಿಗೆ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಜೂ. 30ರ ಬೆಳಗ್ಗೆ 10ಕ್ಕೆ ಶಿವಾಜಿ ವೃತ್ತದಲ್ಲಿರುವ ಕೆ.ಇ. ಬೋರ್ಡ್ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ, ವಿಪ ಸದಸ್ಯ ಪ್ರದೀಪ ಶೆಟ್ಟರ್‌, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಆಗಮಿಸುವರು. ಅಧ್ಯಕ್ಷತೆಯನ್ನು ಕೆ.ಇ. ಬೋರ್ಡ್ ಅಧ್ಯಕ್ಷ ಎಸ್.ಟಿ. ಪಾಟೀಲ ವಹಿಸುವರು. ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಪ್ರಾಚಾರ್ಯರಾದ ಮೋಹನ ಸಿದ್ದಾಂತಿ ಭಾಗವಹಿಸಲಿದ್ದಾರೆ.

ಮೇಳಕ್ಕೆ ಎಸ್ಸೆಸ್ಸೆಲ್ಸಿ, ಪಿಯುಸಿ, ವಿವಿಧ ಪದವಿ ಹಾಗೂ ಇತರೆ ವಿದ್ಯಾರ್ಹತೆ ಹೊಂದಿದ ಎರಡೂ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಧಾರವಾಡ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳ 58 ಕಂಪನಿಗಳು ಮೇಳಕ್ಕೆ ಬರಲಿದ್ದು ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಪತ್ರ ನೀಡಲಿದ್ದಾರೆ. ಮೇಳದ ಯಶಸ್ವಿಯಾಗಿ ಶಾಲೆಯ 41 ಶಿಕ್ಷಕರು ಹಾಗೂ 100 ಜನ ಎನ್ನೆಸ್ಸೆಸ್‌ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಾಲೇಜಿನ ಕೆಳ ಮಹಡಿಯಲ್ಲಿ ಐದು, ನೆಲ ಮಹಡಿಯಲ್ಲಿ ಆರು ಹಾಗೂ ಮೊದಲ ಮಹಡಿಯಲ್ಲಿ ಏಳು ಕೋಣೆಗಳನ್ನು ಸಂದರ್ಶನಕ್ಕೆ ಸಜ್ಜುಗೊಳಿಸಲಾಗಿದೆ. ಆಯಾ ವಿದ್ಯಾರ್ಹತೆಗೆ ತಕ್ಕಂತೆ ನೋಂದಣಿಗೆ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಮೇಳಕ್ಕೆ ಆಗಮಿಸಿ ಅವಕಾಶದ ಲಾಭ ಪಡೆಯಬೇಕು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಮನವಿ ಮಾಡಿದ್ದಾರೆ.