ಎಟಿಎಂ ಬದಲಿಸಿ ಹಣ ವಂಚನೆ: ಮೂವರು ಆರೋಪಿಗಳ ಬಂಧನ

| Published : Sep 26 2024, 10:24 AM IST / Updated: Sep 26 2024, 10:34 AM IST

ಸಾರಾಂಶ

ಒಂದು ಲಕ್ಷ ರುಪಾಯಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಅಜೆಕಾರು ಹೆನ್ರಿ ಡಿಸೋಜ ಅವರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರುಪಾಯಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ಪ್ರಕರಣವನ್ನು ಭೇದಿಸಿ ಅಂತಾರಾಜ್ಯ ಕುಖ್ಯಾತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಜೆಕಾರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮಹಾರಾಷ್ಟ್ರ ದ ಸೋಲಾಪುರ ದ ಕೇದಾರನಾಥ ನಗರದ ಶ್ರವಣ್ ಸತೀಶ ಮಿನಜಗಿ, (27), ಸೋಲಾಪುರ ತಾಲೂಕಿನ ಕುಮ್ಮಾ ನಗರ ದ ಇಂದಿರಾ ನಗರ‌ದ ಪ್ರದೀಪ ಮಾರುತಿ ಇಂಗ್ಲೆ, (27), ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ವನಗಲ್ಲಿಯ ಕಿರಣ್ ಬಾಲು ಚೌಹಾನ್ (28), ಎಂಬವರನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಪತ್ತೆಗಾಗಿ ಅಜೆಕಾರು ಪೊಲೀಸರು ಬಲೆಬೀಸಿದ್ದಾರೆ. ಈ ಮೂವರು ಕಳ್ಳರ ಮೇಲೆ ಹೆಚ್ಚು ವಿವಿಧ ಠಾಣೆಗಳಲ್ಲಿ 70 ಕ್ಕೂಪ್ರಕರಣ ದಾಖಲಾಗಿದೆ.

ಅಜೆಕಾರು ಪೊಲೀಸ್ ಠಾಣೆಯ ಪಿಎಸ್‌ಐ ಶುಭಕರ, ಸಿಬ್ಬಂದಿಯವರೊಂದಿಗೆ ಮಂಗಳ ವಾರ ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಆರೋಪಿ ಗಳಿಂದ ಕೃತ್ಯಕ್ಕೆ ಬಳಸಿದ 4,00,000 ಮೌಲ್ಯದ ಕಾರು , ಮೊಬೈಲ್ ಫೋನ್‌ಗಳು-3, ವಿವಿಧ ಬ್ಯಾಂಕ್‌ಗಳ ಒಟ್ಟು 52 ಎಟಿಎಮ್ ಕಾರ್ಡ್‌ಗಳು-52 ಸೇರಿದಂತೆ ಒಟ್ಟು 4,85, 000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸೆ.16 ರಂದು ಸಂಜೆ ಬೊಂಡುಕುಮೇರಿ ನಿವಾಸಿ ಹೆನ್ರಿ ಡಿ‘ಸೋಜಾ ಅಜೆಕಾರು ಪೇಟೆಯಲ್ಲಿರುವ ಎಟಿಎಂನಿಂದ ಹಣ ಡ್ರಾ ಮಾಡಲು ಬಂದಾಗ ಅವರ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ಅವರ ಎಟಿಎಮ್ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್ ಕೊಟ್ಟು, ಅವರ ಕಾರ್ಡ್‌ ನಿಂದ ಕಾರ್ಕಳದ ಎಟಿಎಮ್‌ ನಲ್ಲಿ 1 ಲಕ್ಷ ರುಪಾಯಿಯನ್ನು ಡ್ರಾ ಮಾಡಿದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳವಾರವು ಕಾರ್ಕಳ ತಾಲೂಕಿನ ಜೋಡುರಸ್ತೆಯ ಎಟಿಎಂನಲ್ಲಿಯು ಹಣ ಎಗರಿಸಿದ ಎರಡನೆ ಪ್ರಕರಣವು ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅರುಣ ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಎಸ್.ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಪರಮೇಶ್ವರ ಹೆಗಡೆ ಅವರ ನಿರ್ದೇಶನದಂತೆ ಕಾರ್ಕಳ ಉಪವಿಭಾಗದ ಡಿ.ವೈ.ಎಸ್.ಪಿ ಅರವಿಂದ ಎನ್ ಕಲ್ಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್, ಅಜೆಕಾರು ಪಿ ಎಸ್ ಐ ರವಿ ಬಿ.ಕೆ., ನೇತೃತ್ವದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಪಿಎಸ್‌ಐ -ತನಿಖೆಯ ಶುಭಕರ ಮತ್ತು ಸಿಬ್ಬಂದಿ ಸತೀಶ ಬೆಳ್ಳಿ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್, ಬಸವರಾಜ ಭದ್ರಶೆಟ್ಟಿ ಶಶಿಕಲಾ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ನಿತಿನ್ ಹಾಗೂ ದಿನೇಶ ಅವರ ಸಹಕಾರದಿಂದ ಆರೋಪಿ ಮತ್ತು ಸ್ವತ್ತು ಪತ್ತೆ ಕಾರ್ಯ ನಡೆಸಿದ್ದಾರೆ.