ಸಾರಾಂಶ
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಹಣವಿದ್ದರೂ ಮೀನಮೇಷ: ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜು
ಕನ್ನಡಪ್ರಭ ವಾರ್ತೆ ತುಮಕೂರುಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಹಣವಿದ್ದರೂ, ಅದು ಕಾರ್ಮಿಕರಿಗೆ ತಲುಪತ್ತಿಲ್ಲ. ಹಾಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ಜನ ಜಾಗ್ರತಿ ಮೂಡಿಸುವ ಸಲುವಾಗಿ ಶ್ರೀಸಿದ್ಧಗಂಗಾ ಸ್ವಾಮೀಜಿಗಳ ಪುತ್ಥಳಿಯೊಂದಿಗೆ ರಥಯಾತ್ರೆ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜು ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಜನ ಜಾಗ್ರತಿ ಮತ್ತು ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಂಡಿದ್ದಾರೆ. ಕಲ್ಯಾಣ ಮಂಡಳಿಯಲ್ಲಿ 20 ಸಾವಿರ ಕೋಟಿಗೂ ಅಧಿಕ ಹಣವಿದೆ. ಆರೋಗ್ಯ ಶಿಬಿರಕ್ಕೆ ಹಣ ಬಿಡುಗಡೆ ಮಾಡುವ ಮಂಡಳಿ, ಕಾರ್ಮಿಕರಿಗೆ ಸವಲತ್ತುಗಳ ವಿಚಾರ ಬಂದಾಗ, ಅಸಲಿ, ನಕಲಿ ಎಂಬ ಲೆಕ್ಕಾಚಾರಕ್ಕೆ ಮುಂದಾಗುತ್ತದೆ, ಇದು ಸರಿಯಲ್ಲ. ನೋಂದಾಯಿತ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ವತಿಯಿಂದ ನೀಡುವ ಸಲವತ್ತುಗಳು ಲಭ್ಯವಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಶೈಕ್ಷಣಿಕ ಪ್ರೋತ್ಸಾಹ, ಮದುವೆ, ವಸತಿ ಯೋಜನೆಗಳಿಗಾಗಿ ಸಾವಿರಾರು ಜನ ಅರ್ಜಿ ಹಾಕಿ ಕಾದು ಕುಳಿತಿದ್ದರೂ, ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಮದುವೆ ಸಂದರ್ಭದಲ್ಲಿ ಸಹಾಯಧನಕ್ಕೆ ಹಾಕಿದ ಅರ್ಜಿ, ಮಗು ಹುಟ್ಟಿ, ಶಾಲೆಗೆ ಹೋಗಲು ಪ್ರಾರಂಭವಾದರೂ ಬಿಡುಗಡೆಯಾಗಿಲ್ಲ. ಹಾಗಾಗಿ ಸರಕಾರದ ಈ ನಡೆಯ ವಿರುದ್ಧ ಕಾರ್ಮಿಕರಲ್ಲಿ ಜಾಗ್ರತಿ ಮೂಡಿಸಿ, ನಿಗದಿತ ಕಾಲಾವಧಿಯಲ್ಲಿಯೇ ಅನುದಾನ ನೀಡುವಂತೆ ಸರಕಾರದ ಮೇಲೆ ಒತ್ತಡ ತರಲಾಗುತ್ತಿದೆ ಎಂದರು.
ನಮ್ಮ ಸಂಘಟನೆ ಸಲ್ಲಿಸಿರುವ 19 ವಿವಿಧ ಬೇಡಿಕೆಗಳ ಬಗ್ಗೆ 2025- 26ನೇ ಸಾಲಿನ ಬಜೆಟ್ ನಲ್ಲಿ ಸರಕಾರ ಸರಿಯಾದ ನಿರ್ಧಾರ ಪ್ರಕಟಿಸಲಿದ್ದರೆ, ಬೆಂಗಳೂರಿನ ಕಾರ್ಮಿಕರ ಭವನದಿಂದ ಬೀದರ ಬಸವ ಕಲ್ಯಾಣದವರೆಗೆ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಪುತ್ಥಳಿಯೊಂದಿಗೆ ರಥಯಾತ್ರೆ ಕೈಗೊಂಡು, ಹೋರಾಟಕ್ಕೆ ಕಾರ್ಮಿಕರನ್ನು ಅಣಿಗೊಳಿಸಲಾಗುವುದು ಎಂದು ಬಿ.ದೇವರಾಜು ನುಡಿದರು.ಕರ್ನಾಟಕ ರಾಜ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ರಾಜ್ಯಪಾಲರಾದ ಆಶಾ ಪ್ರಸ್ನನಕುಮಾರ್ ಮಾತನಾಡಿ, ಕಾರ್ಮಿಕರಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡು ವಿಧಗಳಿವೆ, ಸಂಘಟಿತರ ಜೊತೆಗೆ ಹೋರಾಡಲು ಹಲವಾರು ಕಾರ್ಮಿಕ ಸಂಘಟನೆಗಳಿವೆ. ಆದರೆ ಅಸಂಘಟಿತರಿಗೆ ಇಂತಹ ಸಂಸ್ಥೆಗಳೇ ಸಾಥ್ ನೀಡಬೇಕಾಗಿದೆ. ನಾವೆಲ್ಲರೂ ಹೋರಾಟಗಾರರ ಕೈ ಬಲಪಡಿಸಿದರೆ, ಸರಕಾರದ ಸವಲತ್ತುಗಳು ನಮ್ಮಲ್ಲಿಗೆ ಬರುತ್ತವೆ. ಹಾಗಾಗಿ ಎಲ್ಲರೂ ಬಿ.ದೇವರಾಜು ಮತ್ತು ಶ್ರೀನಿವಾಸ್ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದರು.
ಕಾರ್ಮಿಕ ಅಧಿಕಾರಿಗಳಾದ ಅಬ್ದುಲ್ ರವೂಫ್ ಮತ್ತು ಪೈರೋಜ್ ಪಾಷ ಅವರು ಕಾರ್ಮಿಕ ಇಲಾಖೆಯಿಂದ ಮತ್ತು ಕಾರ್ಮಿಕರ ಕಲ್ಯಾಣ ನಿಧಿಯಿಂದ ವಿವಿಧ ವಲಯದ ಕಾರ್ಮಿಕರಿಗೆ ಲಭಿಸುವ ಸವಲತ್ತುಗಳ ಪರಿಚಯ ಮಾಡಿಕೊಟ್ಟು ಅರ್ಜಿ ಸಲ್ಲಿಸುವ ವಿಧಾನ ಮತ್ತಿತರ ಮಾಹಿತಿ ನೀಡಿದರು.ಕಾರ್ಮಿಕರ ಕುರಿತು ಮಾತನಾಡಿದ ಶ್ರೀಕಾಳಿ ಸ್ವಾಮೀಜಿ, ದುಡಿಯುವ ಕೈಗಳು ಆರೋಗ್ಯದ ಕಡೆಗೆ ಗಮನಹರಿಸಬೇಕು. ಈಗಾಗಲೇ ಸರಕಾರಕ್ಕೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ 19 ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಲಾಗಿದೆ. ಅವುಗಳು ಈಡೇರಬೇಕೆಂದರೆ, ನೀವು ಸಂಘಟನೆಯೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ರಘುರಾವ್ ಮಾತನಾಡಿ, ಕಾರ್ಮಿಕರು ತಾವು ದುಡಿದ ಹಣದಲ್ಲಿ ಒಳ್ಳೆಯ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಕೆಮಿಕಲ್ ಮಿಶ್ರಿತ ಆಹಾರ ಪದಾರ್ಥಗಳಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಗಾಣದಿಂದ ತಯಾರಿಸಿದ ಎಣ್ಣೆ, ಸಾವಯವ ಆಹಾರ ಪದಾರ್ಥಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು.ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಆರ್. ಶ್ರೀನಿವಾಸ್, ಸರ್ವೋದಯ ಮಂಡಳದ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ, ಕಾರ್ಮಿಕ ಮುಖಂಡರಾದ ಮಂಜುನಾಥ್, ರಾಜಣ್ಣ, ಜಗದೀಶ್, ರಾಜಶೇಖರ್, ನರಸಿಂಹರಾಜು ಸೇರಿ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀಸಿದ್ಧಗಂಗಾ ಮಠದಿಂದ ಹೊರಟ ಶ್ರೀಶಿವಕುಮಾರಸ್ವಾಮೀಜಿಗಳ ಪುತ್ಥಳಿ ರಥಯಾತ್ರೆಗೆ ಶ್ರೀಸಿದ್ಧಲಿಂಗಸ್ವಾಮೀಜಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶೇ. 85ಕ್ಕಿಂತಲೂ ಹೆಚ್ಚು ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.