ಹಣ, ಆಸ್ತಿ, ಅಂತಸ್ತು ಬದುಕಿನಲ್ಲಿ ನೆಮ್ಮದಿ ಕರುಣಿಸಲಾರವು

| Published : Jan 15 2024, 01:46 AM IST

ಸಾರಾಂಶ

ಸಾಕ್ಷಾತ್ ಭಗವಾನ್ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಮಾಡುವುದು ಅತ್ಯಂತ ಪುಣ್ಯದ ಕಾರ್ಯಗಳಲ್ಲಿ ಒಂದಾಗಿದೆ. ಶ್ರೀಮದ್ಭಾಗವತ ಉಪನ್ಯಾಸಗಳು ಅನೇಕ ಕಡೆಗಳಲ್ಲಿ ನಡೆದಿವೆ, ಆದರೆ ಏಳು ದಿನಗಳ ಕಾಲ ಸಪ್ತಾಹ ಆಚರಣೆ ಬಹಳ ವಿರಳವಾಗಿದ್ದು, ಅದಕ್ಕೆ ಈ ನೆಲ ಸಾಕ್ಷಿಯಾಗಿರುವುದು ಅತ್ಯಂತ ಸಂತಸ ತಂದ ಕ್ಷಣವಾಗಿದೆ

ಭಟ್ಕಳ: ಹಣ, ಆಸ್ತಿ, ಅಂತಸ್ತು ಯಾವುದೂ ಸಹ ಬದುಕಿನಲ್ಲಿ ನೆಮ್ಮದಿ ಕರುಣಿಸಲಾರವು. ಎಲ್ಲಿಯ ತನಕ ಬದುಕಿನ ಬಗ್ಗೆ ನಮಗೆ ಸ್ಷಷ್ಟತೆ ಇಲ್ಲವೋ ಅಲ್ಲಿಯ ತನಕವೂ ಬದುಕಿನಲ್ಲಿ ಶಾಂತಿ ದೊರೆಯಲಾರದು ಎಂದು ಸಿದ್ದಾಪುರ ಶಿರಳಗಿಯ ಶ್ರೀಚೈತನ್ಯ ರಾಜರಾಮ ಶ್ರೀಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಸ್ವಾಮೀಜಿ ಹೇಳಿದರು.

ಅವರು ಮಾರುಕೇರಿಯ ಹೂತ್ಕಳದ ಶ್ರೀಧನ್ವಂತರಿ ಮಹಾವಿಷ್ಣು, ವಿಘ್ನೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾದ ಶ್ರೀಮದ್ಭಾಗವತ ಸಪ್ತಾಹ ಮತ್ತು ಪಾರಾಯಣದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಬದುಕಿನಲ್ಲಿ ಎಲ್ಲವನ್ನು ಸಾಧಿಸಿ ಆಧ್ಯಾತ್ಮದ ಸಾಧನೆ ಇಲ್ಲವಾದರೆ ಎಲ್ಲವೂ ಶೂನ್ಯ.ನಾನು ಎನ್ನುವುದು ಕ್ಷಣಿಕವಾದುದು, ಜೀವವನ್ನು ದೇವರು ಉಪಯೋಗಿಸಲಿಕ್ಕಾಗಿ ನೀಡಿದ ಕೊಡುಗೆ ಎಂದ ಅವರು, ಅದನ್ನೂ ಮೀರಿದ ವಿಶ್ವ ಪ್ರಜ್ಞೆ, ಪರಮಾತ್ಮ ಪ್ರಜ್ಞೆ ಮಾತ್ರ ಶಾಶ್ವತವಾದದು ಎಂದರು.

ಸಾಕ್ಷಾತ್ ಭಗವಾನ್ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಮಾಡುವುದು ಅತ್ಯಂತ ಪುಣ್ಯದ ಕಾರ್ಯಗಳಲ್ಲಿ ಒಂದಾಗಿದೆ. ಶ್ರೀಮದ್ಭಾಗವತ ಉಪನ್ಯಾಸಗಳು ಅನೇಕ ಕಡೆಗಳಲ್ಲಿ ನಡೆದಿವೆ, ಆದರೆ ಏಳು ದಿನಗಳ ಕಾಲ ಸಪ್ತಾಹ ಆಚರಣೆ ಬಹಳ ವಿರಳವಾಗಿದ್ದು, ಅದಕ್ಕೆ ಈ ನೆಲ ಸಾಕ್ಷಿಯಾಗಿರುವುದು ಅತ್ಯಂತ ಸಂತಸ ತಂದ ಕ್ಷಣವಾಗಿದೆ. ಶ್ರೀಮದ್ಭಾಗವತ ಸಪ್ತಾಹದ ಏಳೂ ದಿನಗಳು ಕೂಡಾ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೋತ್ರಗಳು ಉಪಸ್ಥಿತರಿರುವುದು ಇಂದಿಗೂ ಜನರಲ್ಲಿ ಆ ಸ್ಪೂರ್ತಿ ಇದೆ ಎನ್ನುವುದು ತಿಳಿದು ಸಂತಸವಾಯಿತು ಎಂದರು.

ಶ್ರೀಧನ್ವಂತರಿ ದೇವಸ್ಥಾನದ ವ್ಯವಸ್ಥೆ ನಿಭಾಯಿಸುತ್ತಿರುವುದು,ಇಲ್ಲಿಗೆ ಬಂದ ಭಕ್ತರಿಗೆ ಮಾಡಿಕೊಡುವ ವ್ಯವಸ್ಥೆಯನ್ನು ಅರ್ಚಕರು ತುಂಭಾ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವುದು ಕ್ಷೇತ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದ ಶ್ರೀಗಳು ಅರ್ಚಕ ಶಂಕರ ಭಟ್ಟ ದಂಪತಿಗಳನ್ನು ಆಶೀರ್ವಾದ ಪೂರ್ವಕವಾಗಿ ಗೌರವಿಸಿದ ಶ್ರೀಗಳು ಬದುಕಿನ ಸಾರ್ಥಕತೆಯು ಪರಮಾರ್ಥ ಸಾಧಿಸುವುದರೊಂದಿಗೆ ಇದೆಯೇ ವಿನಃ ಜೀವನದಲ್ಲಿ ಮಾಡಿದ ಸಾಧನೆಯಲ್ಲಲ್ಲ. ಜ್ಞಾನ ಮನುಷ್ಯರಿಗೂ ಇದೆ, ಪ್ರಾಣಿ ಪಕ್ಷಿಗಳಿಗೂ ಇದೆ. ಆದರೆ ಮನುಷ್ಯರಿಗೆ ಜೀವಪ್ರಜ್ಞೆ ದಾಟಿ ಪಾರಮಾರ್ಥ ಸ್ಥಿತಿ ತಲುಪಲು ಸಾಧ್ಯವಾಗುವುದು. ಅದಕ್ಕೆ ಮೊದಲ ಭಕ್ತಿಯೇ ಶ್ರವಣ ಭಕ್ತಿ. ಶಂಕರ ಭಗವತ್ಪಾದರು ಕೂಡಾ ಸತ್ಸಂಗ ಮಾಡಬೇಕು, ಶ್ರವಣ ಮಾಡಬೇಕು ಎಂದು ಹೇಳಿದ್ದಾರೆ ಎಂದರು.

ದೇವಿಮನೆ ಪ್ರಧಾನ ಅರ್ಚಕ ಬಾಲಚಂದ್ರ ಭಟ್ಟ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಧನ್ವಂತರಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ,ಆಡಳಿತ ಮಂಡಳಿಯ ಶ್ರೀಕಂಠ ಹೆಬ್ಬಾರ, ಶ್ರೀನಿವಾಸ ಭಟ್ಟ ಚದರಹಳ್ಳಿ, ಶಿರಸಿಯ ಬಾಲಿಗದ್ದೆಯ ಶಂಕರ ಭಟ್ಟ, ಹರೀಶ ಭಟ್ಟ, ಸುಬ್ರಾಯ ಭಟ್ಟ,ಸತೀಶ ಭಟ್ಟ,ಶ್ರೀಧರ ಭಟ್ಟ ಯೋಗೇಶ ಹೆಬ್ಬಾರ್‌ ಮುಂತಾದವರಿದ್ದರು.