ಕಾಸಿಗಾಗಿ ಸುದ್ದಿ ಮೇಲೆ ನಿಗಾ, ಜಾಹೀರಾತು ಪೂರ್ವಾನುಮತಿ ಅಗತ್ಯ: ಡಿಸಿ

| Published : Apr 01 2024, 12:54 AM IST

ಕಾಸಿಗಾಗಿ ಸುದ್ದಿ ಮೇಲೆ ನಿಗಾ, ಜಾಹೀರಾತು ಪೂರ್ವಾನುಮತಿ ಅಗತ್ಯ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣದಲ್ಲಿ ಬರುವ ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ ವಹಿಸಿದ್ದು, ರಾಜಕೀಯ ಜಾಹೀರಾತುಗಳಿಗೆ ಅಭ್ಯರ್ಥಿ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣದಲ್ಲಿ ಬರುವ ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ ವಹಿಸಿದ್ದು, ರಾಜಕೀಯ ಜಾಹೀರಾತುಗಳಿಗೆ ಅಭ್ಯರ್ಥಿ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಡೀಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಎಂಸಿಎಂಸಿ ಸಮಿತಿ ಕಾರ್ಯನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ರಚಿಸಿದೆ. ಸದರಿ ಸಮಿತಿಗೆ ಪೂರಕವಾಗಿ ಜಾಹೀರಾತು ಪೂರ್ವಾನುಮತಿ ಸೆಲ್, ಮೀಡಿಯಾ ಮಾನಿಟರಿಂಗ್ ಸೆಲ್, ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ರಚಿಸಿ 24 ಗಂಟೆಗಳ ಕಾಲ ಕಾಸಿಗಾಗಿ ಸುದ್ದಿ/ ಜಾಹೀರಾತು ಮೇಲೆ ನಿಗಾ ವಹಿಸಲಾಗುತ್ತಿದೆ ಎಂದರು.

ಒಂದೇ ಸಮಯದಲ್ಲಿ ವಿವಿಧ ಪ್ರಕಟಣೆಗಳಲ್ಲಿ ಭಾವಚಿತ್ರದೊಂದಿಗೆ ಲೇಖನ ರೂಪದಲ್ಲಿ ಸ್ಪರ್ಧಾತ್ಮಕವಾಗಿ ಪ್ರಕಟಗೊಳ್ಳುವ ಬೈಲೈನ್ ಸುದ್ದಿಗಳು, ವೃತ್ತಪತ್ರಿಕೆ ಒಂದೇ ಪುಟದಲ್ಲಿ ಸ್ಪರ್ಧಾತ್ಮಕ ಅಭ್ಯರ್ಥಿ ಶ್ಲಾಘಿಸುವ ರೀತಿಯಲ್ಲಿ ಮತ್ತು ಜಯಗಳಿಸುವ ಸಾಧ್ಯತೆ ಇರುವ ಬಗ್ಗೆ ಲೇಖನ ಪ್ರಕಟಗೊಳ್ಳುವುದು, ಓರ್ವ ಅಭ್ಯರ್ಥಿ ಸಮಾಜದ ಪ್ರತಿಯೊಂದು ವರ್ಗದಿಂದ ಬೆಂಬಲ ಪಡೆಯುತ್ತಿದ್ದು ಮತ್ತು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂಬ ಸುದ್ದಿಗಳು, ಯಾವುದೇ ಸುದ್ದಿ ಒಳಗೊಳ್ಳದೆ ರಾಜ್ಯ/ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಲು ಅಭ್ಯರ್ಥಿ ಅಥವಾ ಪಕ್ಷ ಸಿದ್ಧವಾಗಿದೆ ಎಂದು ಪತ್ರಿಕೆಯಲ್ಲಿ ಕೇವಲ ಶಿರೋನಾಮೆ ಪ್ರಕಟಿಸುವುದು, ಯಾವುದೋ ಪಕ್ಷ ಅಥವಾ ಅಭ್ಯರ್ಥಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸುದ್ದಿಯ ಪ್ರತಿ ವಾಕ್ಯದಲ್ಲಿ ತಿಳಿಸುತ್ತಾ ಚುನಾವಣೆ ಕಣದಲ್ಲಿರುವ ಇನ್ನುಳಿದ ಪಕ್ಷ ಅಥವಾ ಅಭ್ಯರ್ಥಿ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಸುದ್ದಿ, 125-150 ಪದಗಳುಳ್ಳ ಸ್ಥಿರ ಗಾತ್ರದ ಕಠಿಣ ರೂಪದ ಬರವಣಿಗೆ ಹಾಗೂ ಡಬಲ್ ಕಾಲಂನಲ್ಲಿ ಭಾವಚಿತ್ರವಿದ್ದು, ಜಾಹೀರಾತಿನಂತೆ ಬಿಂಬಿಸುವ ಸುದ್ದಿ, ಸ್ಲಾಟ್ ಅಧಾರದ ಮೇಲೆ ಪಾವತಿ ಸುದ್ದಿಯಾಗಿ ಅಭ್ಯರ್ಥಿಯಿಂದ ಪಡೆಯಲಾದ ಅನೇಕ ಪ್ರಕಾರದ ಫಾಂಟ್‍ಗಳು ಹಾಗೂ ಮಲ್ಟಿಪಲ್ ಡ್ರಾಪ್ ಕೇಸ್ ಶೈಲಿಗಳನ್ನು, ಛಾಯಾಚಿತ್ರಗಳನ್ನು ನಿರ್ದಿಷ್ಠ ಪತ್ರಿಕೆಯ ಒಂದೇ ಪುಟದಲ್ಲಿ ಎಲ್ಲವನ್ನು ಮುದ್ರಿಸುವುದನ್ನು ಪೇಡ್ ನ್ಯೂಸ್ ಎಂದು ಪರಿಗಣಿಸಲಾಗುತ್ತದೆ.

ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಎಂಸಿಎಂಸಿ ಸಮಿತಿ ವರದಿಯಂತೆ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ನೋಟಿಸ್ ಜಾರಿಗೊಳಿಸಿ ಉತ್ತರ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಯಾವುದೇ ಅಭ್ಯರ್ಥಿ ಇ-ಪೇಪರ್, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ., ಸಾಮಾಜಿಕ ಜಾಲತಾಣ, ಎಫ್ಎಂ ರೇಡಿಯೋ, ಸಿನಿಮಾ ಹಾಲ್, ಧ್ವನಿ ಮತ್ತು ದೃಶ್ಯ ಒಳಗೊಂಡ ಎಲ್ಇಡಿ ವಾಲ್ ವಾಹನಗಳು, ವಾಣಿಜ್ಯ ಮಳಿಗೆಯಲ್ಲಿರುವ ಎಲ್ಇಡಿ ವಾಲ್‍ಗಳು, ಧ್ವನಿ ಮತ್ತು ಶ್ರವ್ಯ, ಬಲ್ಸ್ ಎಸ್ಎಂಎಸ್, ಬಲ್ಸ್ ಆಡಿಯೋ ಕಾಲ್ ಮೂಲಕ ಕೈಗೊಳ್ಳುವ ಚುನಾವಣಾ ಜಾಹೀರಾತಿಗೆ ಜಿಲ್ಲಾ ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿದೆ. ದಿನಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತಿಗೆ ಅನುಮತಿ ಬೇಕಿಲ್ಲವಾದರು, ಮತದಾನ ಮುಕ್ತಾಯದ ಪೂರ್ವ 48 ಗಂಟೆ ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತಿಗೂ ಪೂರ್ವಾನುಮತಿ ಪಡೆಯಬೇಕಿದೆ ಎಂದರು.

ಎಕ್ಸಿಟ್ ಪೋಲ್ ಭಿತ್ತರಿಸುವಂತಿಲ್ಲ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಒಟ್ಟು 7 ಹಂತದಲ್ಲಿ ನಡೆಯುತ್ತಿದ್ದು, ಕಲಬುರಗಿ ಲೋಕಸಭಾ ಕ್ಷೇತದ ಚುನಾವಣೆ ಮೂರನೇ ಹಂತದಲ್ಲಿ ಅಂದರೆ ಮೇ 7ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕೊನೆ ಹಂತದ ಚುನಾವಣಾ ಮತದಾನ ಮುಗಿಯುವವರೆಗೆ ಮತದಾರರ ಮೇಲೆ ಪ್ರಭಾವ ಬೀರುವ ಎಕ್ಸಿಟ್ ಪೋಲ್ ಭಿತ್ತರಿಸುವಂತಿಲ್ಲ ಎಂದು ಡಿ.ಸಿ. ಸ್ಪಷ್ಟಪಡಿಸಿದರು. ರಾಷ್ಟ್ರ ಮಟ್ಟದ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಸವಿಸ್ತಾರವಾಗಿ ಜಿಲ್ಲಾ ಮಾಧ್ಯಮ ಮತ್ತು ಪ್ರಾಣೀಕರಣ ಕಣ್ಗಾವಲು ಸಮಿತಿ ಕಾರ್ಯನಿರ್ವಹಣೆ, ಕಾಸಿಗಾಗಿ ಸುದ್ದಿ, ಜಾಹೀರಾತು ಪೂರ್ವಾನುಮತಿ ಕುರಿತು ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಡಿಸಿಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿಬಿ ಸೇರಿ ಪತ್ರಕರ್ತರು ಭಾಗವಹಿಸಿದ್ದರು.