ಗುಣಮಟ್ಟದ ಆಹಾರ ಉತ್ಪಾದನೆಗೆ ನಿಗಾ ವಹಿಸಿ

| Published : May 20 2025, 11:52 PM IST

ಸಾರಾಂಶ

ವಾರ್ಷಿಕ 12 ಲಕ್ಷ ರು.ಗಳ ಒಳಗೆ ಆಹಾರ ಉದ್ಧಿಮೆ ನಡೆಸುವವರು ಎಫ್ಎಸ್ಎಸ್ಎ ನೋಂದಣಿ ಹಾಗೂ 12 ಲಕ್ಷ ಮೇಲ್ಪಟ್ಟು ಉದ್ದಿಮೆ ನಡೆಸುವವರು ಎಫ್ಎಸ್ಎಸ್ಎ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ತಪ್ಪಿದಲ್ಲಿ 10 ಲಕ್ಷದ ವರೆಗೆ ದಂಡ ಹಾಗೂ ಜೈಲು ಸಜೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಹಾರ ಉದ್ದಿಮೆದಾರರನ್ನು ಒಂದೇ ಸೂರಿನಡಿ ಪರಿವೀಕ್ಷಣೆ ಹಾಗೂ ನಿಬಂಧನೆಗೆ ಒಳಪಡಿಸಿ ಸೇವನೆಗೆ ಯೋಗ್ಯವಾದ ಆಹಾರವನ್ನು ಜಿಲ್ಲೆಯಲ್ಲಿ ಪೂರೈಸಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯಮ ಪರವಾನಗಿ ಕಡ್ಡಾಯ

ವಾರ್ಷಿಕ 12 ಲಕ್ಷ ರು.ಗಳ ಒಳಗೆ ಆಹಾರ ಉದ್ಧಿಮೆ ನಡೆಸುವವರು ಎಫ್ಎಸ್ಎಸ್ಎ ನೋಂದಣಿ ಹಾಗೂ 12 ಲಕ್ಷ ಮೇಲ್ಪಟ್ಟು ಉದ್ದಿಮೆ ನಡೆಸುವವರು ಎಫ್ಎಸ್ಎಸ್ಎ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ತಪ್ಪಿದಲ್ಲಿ 10 ಲಕ್ಷದ ವರೆಗೆ ದಂಡ ಹಾಗೂ ಜೈಲು ಸಜೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಜಿಲ್ಲೆಯಲ್ಲಿ ಉದ್ದಿಮೆದಾರರಿಗೆ ನೋಂದಣಿ ಹಾಗೂ ಪರವಾನಗಿ ನೀಡುವ ಕಾರ್ಯ ನಿರಂತರವಾಗಿಬೇಕಾಗಿದ್ದು, ಈ ವರೆಗೆ ಶೇ. 60 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ ಎಂದರು.

ಬಾಕಿ ಇರುವ ಶೇ. 40 ರಷ್ಟು ಉದ್ದಿಮೆದಾರರನ್ನು ಈ ಕಾನೂನಿನ ವ್ಯಾಪ್ತಿಗೆ ಒಳಪಡಿಸಲು ತ್ವರಿತ ಕ್ರಮವಹಿಸಬೇಕು. ಕೆಲವು ಉದ್ದಿಮೆದಾರರಿಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ತಮ್ಮಷ್ಟಕ್ಕೆ ತಾವು ಕೆಲವು ಬೇಕರಿಗಳು, ತಿಂಡಿ ತಿನಿಸು ಉತ್ಪಾದನೆ, ಮಾರಾಟ ಮಾಡುವ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ಮಾಡುತ್ತಿರುತ್ತಾರೆ. ಅಂತಹವರನ್ನು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಸಂಪರ್ಕ ಮಾಡಿ ನೋಂದಣಿ, ಪರವಾನಗಿ ಮಾಡಿಸಲು ಅರಿವು ಮೂಡಿಸಲು ಕ್ರಮವಹಿಸಬೇಕು ಎಂದರು.

ಕಾಯ್ದೆ ವ್ಯಾಪ್ತಿಗೆ ಒಳಪಡಿಸಿ

ಈ ವರೆಗೆ ಜಿಲ್ಲೆಯಲ್ಲಿ 5,362 ಗುರಿಗೆ ಎದುರಾಗಿ 3,423 ಆಹಾರ ಉದ್ದಿಮೆದಾರರನ್ನು ಹಾಗೂ 1787 ಗುರಿಗೆ ಎದುರಾಗಿ 889 ಪರವಾನಗಿದಾರರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಾಕಿ ಇರುವ 2,837 ಉದ್ದಿಮೆದಾರರನ್ನು ಈ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿ ಶೇ. 100 ರಷ್ಟು ಪ್ರಗತಿಯನ್ನು ಸಾಧಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿನ ಅಡುಗೆ ತಯಾರಕರಿಗೆ ಎಫ್ಎಸ್ಎಸ್ಎ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕು. ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಣ್ಣು ಮತ್ತು ತರಕಾರಿ ಮಳಿಗೆಗಳು ಎಫ್ಎಸ್ಎಸ್ಎ ನೋಂದಣಿ,ಪರವಾನಗಿ ಪಡೆಯಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ಇಡಬೇಕು ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.