ಸಾರಾಂಶ
ಕೊಪ್ಪ ತಾಲೂಕಿನ ಬೇರುಕೊಡಿಗೆ ಸುತ್ತಮುತ್ತಲಿನ ಜನರಲ್ಲಿ ಆತಂಕ । ಕಳೆದ ವರ್ಷ ಇಡೀ ತಾಲೂಕಲ್ಲಿ ಒಂದೇ ಒಂದು ಪ್ರಕರಣ ಪತ್ತೆ । ಜಿಲ್ಲೆಯಲ್ಲಿ ಈವರೆಗೆ ಒಟ್ಟು 19 ಪ್ರಕರಣಗಳು ಪತ್ತೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಈವರೆಗೆ 18 ಪ್ರಕರಣಗಳು ಈ ಭಾಗದಲ್ಲಿ ಪತ್ತೆಯಾಗಿವೆ.ಕಳೆದ ವರ್ಷ ಕೊಪ್ಪ ತಾಲೂಕಿನಲ್ಲಿ ಕೇವಲ ಒಂದೇ ಒಂದು ಪ್ರಕರಣ ಮಾತ್ರ ಪತ್ತೆಯಾಗಿತ್ತು. ಆದರೆ, ಈ ಬಾರಿ ಜನವರಿಯಿಂದ ಈವರೆಗೆ 18 ಪ್ರಕರಣಗಳು ಪತ್ತೆಯಾಗಿವೆ. ಇಲ್ಲೊಂದು ಆತಂಕದ ವಿಷಯವೆಂದರೆ, ಬೇರುಕೊಡಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.ಮೈಸೂರು ಪ್ಲಾಂಟೇಷನ್, ಓಎಲ್‌ವಿ ಎಸ್ಟೇಟ್ ಹಾಗೂ ದೇವಂಗಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿರುವ ತೋಟದ ಕಾರ್ಮಿಕರಲ್ಲಿ ಮಾತ್ರವಲ್ಲ, ಇಲ್ಲಿನ ನಿವಾಸಿಗರು ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.ಓಎಲ್‌ವಿ ಎಸ್ಟೇಟ್‌ನಲ್ಲಿ ಮರಗಸಿ ಮಾಡಿದ್ದು, ಇಲ್ಲಿನ ಸೌದೆಯನ್ನು ಆರಿಸಲು ಹೋಗಿದ್ದ ಸಂದರ್ಭದಲ್ಲಿ ಪ್ರಥಮ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಓಎಲ್‌ವಿ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲೂ ಕೆಲಸ ಮಾಡಲು ಹೋಗಿರುವ ಕಾರ್ಮಿಕರಲ್ಲೂ ಮಂಗನಕಾಯಿಲೆ ಪತ್ತೆಯಾಗಿದೆ. ಬಾಲಗಡಿಯಿಂದ ಬೇರುಕೊಡಿಗೆ ತೋಟಕ್ಕೆ ಹೋಗಿದ್ದ ಮಹಿಳೆಯಲ್ಲೂ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.ನುಗ್ಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕರ್ನಾಟಕವೂ ಸೇರಿದಂತೆ ಮಧ್ಯಪ್ರದೇಶದ ಕೂಲಿ ಕಾರ್ಮಿಕರು ಇದ್ದು, ಇವರು ಕಾಫಿ ತೋಟಗಳಲ್ಲಿ ಲೈನ್‌ಗಳಲ್ಲಿ ವಾಸವಾಗಿದ್ದಾರೆ. ಇಲ್ಲಿ ಪತ್ತೆಯಾಗಿರುವ 18 ಪ್ರಕರಣಗಳ ಪೈಕಿ 7 ಪ್ರಕರಣಗಳು ಮಧ್ಯಪ್ರದೇಶದಿಂದ ವಲಸೆ ಬಂದಿರುವ ಕಾರ್ಮಿಕರಲ್ಲಿ ಕಂಡು ಬಂದಿದೆ.ರೋಗ ಲಕ್ಷಣಗಳು: ಅತಿಯಾದ ತಲೆನೋವು, ಜ್ವರ, ಮೈಕೈ ನೋವು, ಕಣ್ಣು ಕೆಂಪಾಗುವುದು, ರಕ್ತಸ್ರಾವ. ಇವುಗಳು ಮಂಗನ ಕಾಯಿಲೆಯ ಗುಣಲಕ್ಷಣಗಳು.ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಪಡೆದರೆ ಗುಣವಾಗಲಿದೆ. ಬಹು ಅಂಗಾಂಗ ವೈಫಲ್ಯತೆ ಇದ್ದವರಲ್ಲಿ ಈ ಸೋಂಕು ಕಾಣಿಸಿ ಕೊಂಡರೆ ಗುಣವಾಗುವುದಕ್ಕಿಂತ ಅಪಾಯವೇ ಹೆಚ್ಚು. ಈ ವರ್ಷದಲ್ಲಿ ಶೃಂಗೇರಿ ತಾಲೂಕಿನಲ್ಲಿ ಓರ್ವರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ.ಈ ಸೋಂಕು ತಡೆಗಟ್ಟಬೇಕಾದರೆ ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈತುಂಬಾ ಬಟ್ಟೆ ಧರಿಸಬೇಕು. ಕಾಡು, ತೋಟಗಳಿಗೆ ಕೆಲಸಕ್ಕೆ ಹೋಗುವಾಗ ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿಕೊಳ್ಳಬೇಕು, ತೋಟದಿಂದ ಬಂದ ನಂತರ ಬಿಸಿ ನೀರು ಸ್ನಾನ ಮಾಡಿ ಬಟ್ಟೆಗಳನ್ನು ನೆನೆಸಿ, ಸೋಪು ಬಳಸಿ ತೊಳೆಯಬೇಕು.ಕಾಡಿನಿಂದ ಮನೆಗಳಿಗೆ ಬರುವ ದನ ಕರುಗಳ ಮೈ ಮೇಲಿನ ಉಣ್ಣೆಗಳನ್ನು ತೆಗೆದು ಉಣ್ಣೆ ನಿವಾರಕ ತೈಲ ಲೇಪಿಸಬೇಕು, ದನದ ಕೊಟ್ಟಿಗೆಯ ಸುತ್ತಲೂ ಉಣ್ಣೆ ನಿವಾರಕ ಔಷಧವನ್ನು ಸಿಂಪಡಿಸಬೇಕು, ಮಂಗಗಳು ಸತ್ತಿರುವುದು ಕಂಡು ಬಂದರೆ ಗ್ರಾಮ ಪಂಚಾಯ್ತಿ ಅಥವಾ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು.ಕಾಡಿನಲ್ಲಿ ಬಿದ್ದಿರುವ ಒಣಗಿದ ಎಲೆಗಳನ್ನು ತಂದು ಮನೆ ಸುತ್ತಮುತ್ತ ರಾಶಿ ಹಾಕಿಕೊಳ್ಳಬಾರದು, ಕೈ ಗವಸುಗಳನ್ನು ಧರಿಸದೇ ಸತ್ತ ಪ್ರಾಣಿಗಳನ್ನು ಮುಟ್ಟಬಾರದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.----- ಬಾಕ್ಸ್ ---ಕೊಪ್ಪ ತಾಲೂಕಿನಲ್ಲಿ 74 ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಇವುಗಳಲ್ಲಿ 18 ಜನರಲ್ಲಿ ಮಂಗನ ಕಾಯಿಲೆ ಸೋಂಕಿರುವುದು ಪತ್ತೆಯಾಗಿದೆ. ಈವರೆಗೆ 6 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಈವರೆಗೆ ಒಂದೂವರೆ ಸಾವಿರ ಬಾಟಲಿ ಉಣ್ಣೆ ವಿಕರ್ಷಕ ತೈಲ ಹಂಚಲಾಗಿದೆ.ಡಾ. ಮಹೇಂದ್ರ ಕಿರಿಟಿತಾಲೂಕು ಆರೋಗ್ಯಾಧಿಕಾರಿ, ಕೊಪ್ಪ
13 ಕೆಸಿಕೆಎಂ 1ಮಂಗನ ಕಾಯಿಲೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೊಪ್ಪ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆದಿರುವುದು.