ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಕಾಟ ಮತ್ತು ಕೋತಿಗಳ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.ಗ್ರಾಮದ ಪ್ರಮುಖ ರಸ್ತೆಗಳು ಸೇರಿದಂತೆ ಸಣ್ಣ ಸಣ್ಣ ಬೀದಿಗಳಲ್ಲಿ ಬೀದಿ ನಾಯಿಗಳ ಕಾಟಕ್ಕೆ ಮಹಿಳೆಯರು ಮತ್ತು ಚಿಕ್ಕಮಕ್ಕಳು ಕಂಗಾಲಾಗಿದ್ದು, ಮಕ್ಕಳ ಮತ್ತು ಮಹಿಳೆಯರು ನಾಯಿಗಳ ದಾಳಿಗೆ ತುತ್ತಾಗಿರುವಂಥ ಅನೇಕ ಪ್ರಕರಣಗಳು ಈಗ ಒಂದೊಂದಾಗಿ ಬಹಿರಂಗವಾಗುತ್ತಿವೆ. ಬೀದಿ ನಾಯಿಗಳನ್ನು ನಿಯಂತ್ರಿಸದ ಗ್ರಾಮ ಪಂಚಾಯಿತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದಸರಾ ಹಬ್ಬದ ನಿಮಿತ್ತ ಶಾಲೆಗಳಿಗೆ ರಜೆ ಇದ್ದು ಮಕ್ಕಳು ತಮ್ಮ ಮನೆ ಮುಂದೆ ಆಟವಾಡುವಾಗ, ಅಂಗಡಿಗೆ ತೆರಳುವ ವೇಳೆ ಬಹುತೇಕ ಕಡೆ ಮಕ್ಕಳ ಮೇಲೆ ನಾಯಿ ದಾಳಿ ಮಾಡಿ ಕಡಿದಿವೆ. ಇದರ ಜೊತೆಗೆ ಸಂತೆಗೆ, ನೀರು ತರುವ ವೇಳೆ ಸಂಜೆ ಮತ್ತು ಬೆಳಗ್ಗೆ ಮನೆ ಮುಂದಿನ ಅಂಗಳ ಕಸ ಬಳೆಯುವ ವೇಳೆ ನಾಯಿಗಳು ಅನೇಕ ಮಹಿಳೆಯರಿಗೆ ಕಡಿದ ಘಟನೆಗಳು ಇವೆ. ಈ ಕುರಿತು ಗ್ರಾಪಂಗೆ ದೂರು ಸಲ್ಲಿಸಿದ್ದರೂ ಇನ್ನೂ ಕ್ರಮಕೈಗೊಂಡಿಲ್ಲ ಏಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.ಮನೆ ಮಾಳಿಗೆ ಮೇಲೆ ಓಡಾಡುವ ಕೋತಿಗಳು ಕೆಲಮ್ಮೊಮ್ಮೆ ಬೀದಿಗೆ ಇಳಿದು ನಡೆದಾಡುವರಿಗೆ ಕೈ ಕಾಲು, ಕುತ್ತಿಗೆ ಮೇಲೆ ದಾಳಿ ಮಾಡಿವೆ. ಇದರಿಂದ ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಹ ಪಂಚಾಯಿತಿಗೆ ವಿಷಯ ತಿಳಿಸಿದ್ದರೂ ಪಂಚಾಯಿತಿ ಸಂಬಂಧಿಸಿದ ಅರಣ್ಯ ಇಲಾಖೆಗೆ ಗಮನಕ್ಕೆ ತರುವ ಪ್ರಯತ್ನ ಮಾಡಿಲ್ಲ ಎನ್ನುವ ಆರೋಪ ಸಹ ಇದೆ.ಈಗ ಹಬ್ಬದ ದಿನಗಳಾಗಿದ್ದು ಅಂಗಡಿ, ವಾಹನಗಳ ಪೂಜೆ ಜೋರಾಗಿದ್ದು, ಕೋತಿಗಳು ಏಕಾಏಕೀ ದಾಳಿ ಮಾಡುವ ಭಯ ಹೆಚ್ಚಾಗಿದೆ. ಒಮ್ಮೊಮ್ಮೆ ನಡೆದುಕೊಂಡು ಹೋಗುವವರ ಮೇಲೆ ದಾಳಿ ಮಾಡುವ ಕೋತಿಗಳ ಹಿಂಡಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ ಎಂದು ಗ್ರಾಮದ ಬಸವರಾಜ, ಶರಣಪ್ಪ ಮತ್ತು ಸಿದ್ದನಗೌಡ ತಿಳಿಸಿದ್ದಾರೆ.
ಗ್ರಾಮದಲ್ಲಿ ನಾಯಿ ಮತ್ತು ಕೋತಿಗಳ ಕಾಟ ಹೆಚ್ಚಾಗಿದ್ದು, ಕೂಡಲೇ ಅವುಗಳ ನಿಯಂತ್ರಣ ಮಾಡದಿದ್ದರೆ ಮುಂದೆ ಗ್ರಾಮಸ್ಥರಲ್ಲೆ ಸೇರಿ ಪಂಚಾಯಿತಿ ಮುಂದೆ ಹೋರಾಟ ಮಾಡುವುದಾಗಿ ಗ್ರಾಮಸ್ಥ ಗಣೇಶ ಎಚ್ಚರಿಸಿದ್ದಾರೆ.ಅರಣ್ಯ ಇಲಾಖೆಯಿಂದ ಕೋತಿ ಹಿಡಿಯುವವರನ್ನು ಕರೆಯಿಸಿ ಕಾರ್ಯಾಚರಣೆ ನಡೆಸಿದರೆ ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ. ಈ ಹಣವನ್ನು ಗ್ರಾಪಂ ನೀಡಬೇಕು. ಗ್ರಾಪಂ ಹಣ ನೀಡಿದರೆ, ನಾಳೆಯೇ ಕೋತಿ ಹಿಡಿಯುವವರನ್ನು ಕಳುಹಿಸಲಾಗುವುದು ಎಂದು ಉಪ ಅರಣ್ಯ ಇಲಾಖೆ ಅಧಿಕಾರಿ ದೇವಪ್ಪ ತಿಳಿಸಿದ್ದಾರೆ.