ಏಳು ವರ್ಷದಿಂದ ಬಿದರಕೋಟೆಯಲ್ಲಿ ಮಂಗಗಳ ಹಾವಳಿ...!

| Published : Apr 07 2025, 12:35 AM IST

ಸಾರಾಂಶ

ಸತತ ಏಳು ವರ್ಷಗಳಿಂದ ಮದ್ದೂರು ತಾಲೂಕಿನ ಬಿದರಕೋಟೆ ಗ್ರಾಮದ ಜನರು ಮಂಗಗಳ ಹಾವಳಿಯಿಂದ ತೀವ್ರವಾಗಿ ಕಂಗೆಟ್ಟಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಂಗಗಳಿಂದ ರಕ್ಷಿಸಿಕೊಳ್ಳಲಾಗದೆ ದಿಕ್ಕೆಟ್ಟಿದ್ದು, ಇಂದಿಗೂ ಅವುಗಳ ಉಪಟಳದಿಂದ ಪಾರಾಗದೆ ತತ್ತರಿಸುತ್ತಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸತತ ಏಳು ವರ್ಷಗಳಿಂದ ಮದ್ದೂರು ತಾಲೂಕಿನ ಬಿದರಕೋಟೆ ಗ್ರಾಮದ ಜನರು ಮಂಗಗಳ ಹಾವಳಿಯಿಂದ ತೀವ್ರವಾಗಿ ಕಂಗೆಟ್ಟಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಂಗಗಳಿಂದ ರಕ್ಷಿಸಿಕೊಳ್ಳಲಾಗದೆ ದಿಕ್ಕೆಟ್ಟಿದ್ದು, ಇಂದಿಗೂ ಅವುಗಳ ಉಪಟಳದಿಂದ ಪಾರಾಗದೆ ತತ್ತರಿಸುತ್ತಿದ್ದಾರೆ.

ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆ, ಗ್ರಾಮ ಪಂಚಾಯ್ತಿಗಳಿಗೆ ನೂರಾರು ಬಾರಿ ಪತ್ರ ವ್ಯವಹಾರ ಮಾಡಿದರೂ ಹಣಕಾಸಿನ ಕೊರತೆಯನ್ನು ಮುಂದಿಟ್ಟುಕೊಂಡು ಗ್ರಾಮಸ್ಥರ ಮನವಿಗೆ ಸ್ಪಂದಿಸದೆ ಕೈಚೆಲ್ಲಿದ್ದಾರೆ.

ಬೆಳೆಗಳ ಮೇಲೆ ದಾಳಿ:

೨೦೧೯ರಿಂದ ಕೋತಿಗಳ ಉಪಟಳ ಈ ವ್ಯಾಪ್ತಿಯಲ್ಲಿ ಹೆಚ್ಚಾಯಿತು. ಬಿದರಕೋಟೆ ಗ್ರಾಮದಿಂದ ಗೂಳೂರಿಗೆ ಹೋಗುವ ಅಡ್ಡಹಳ್ಳದ ಸುಮಾರು ೪೦ ಎಕರೆ ಪ್ರದೇಶದಲ್ಲಿ ೧೦೦ಕ್ಕೂ ಹೆಚ್ಚು ಕೋತಿಗಳು ಹಲವು ವರ್ಷಗಳಿಂದ ಬೀಡುಬಿಟ್ಟಿವೆ. ಬಿದರಕೋಟೆ ರೈತರು ತೆಂಗು, ಅಡಿಕೆ, ಬಾಳೆ, ಜೋಳ, ಹಲಸಿನಹಣ್ಣು, ಮಾವಿನಹಣ್ಣು, ಸೀಬೆ, ಸೀತಾಫಲ, ಪರಂಗಿ ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿದ್ದು, ಈ ಬೆಳೆಗಳ ಮೇಲೆ ಕೋತಿಗಳ ನಡೆಸುವ ದಾಳಿ ಹೇಳತೀರದಾಗಿದೆ.

ಕೋತಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲಾಗದೆ ಅನೇಕ ವರ್ಷಗಳಿಂದ ರೈತರು ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ. ಈ ಕಡೆ ರೈತರು ಬೆಳೆದ ಬೆಳೆಯೂ ಅವರ ಕೈ ಸೇರುತ್ತಿಲ್ಲ. ಮತ್ತೊಂದೆಡೆ ಸರ್ಕಾರದಿಂದ ರೈತರಿಗೆ ಯಾವುದೇ ಪರಿಹಾರ ಹಣವೂ ಕೂಡ ಪಾವತಿಯಾಗುತ್ತಿಲ್ಲ ಎಂದು ರೈತರು ಅಳಲು ವ್ಯಕ್ತಪಡಿಸಿದ್ದಾರೆ.

ಕೋತಿಗಳ ಹಾವಳಿ ತಡೆಯಲು ಪಟಾಕಿ ಸಿಡಿಸಿದ್ದಾಯಿತು. ಡಬ್ಬಗಳಿಂದ ಜೋರಾಗಿ ಶಬ್ಧ ಮಾಡಿ ಓಡಿಸುವ ಪ್ರಯತ್ನ ನಡೆಸಲಾಯಿತು. ಸಾಕಷ್ಟು ಬಾರಿ ಮಂಗಗಳನ್ನು ಬೆದರಿಸಿ ಹಾಲಿ ಇರುವ ಜಾಗದಿಂದ ದೂರಕ್ಕೆ ಅಟ್ಟುವ ಪ್ರಯತ್ನ ನಡೆಸಿದರೂ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ರೈತರು ನಡೆಸಿದ ಯಾವುದೇ ಪ್ರಯತ್ನಕ್ಕೂ ಮಂಗಗಳು ಮಾತ್ರ ಮಣಿಯುತ್ತಿಲ್ಲ. ಇರುವ ಸ್ಥಳವನ್ನು ಬಿಟ್ಟು ಕದಲದೆ ಠಿಕಾಣಿ ಹೂಡಿವೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಮಂಗಗಳ ಸಂತಾನಾಭಿವೃದ್ಧಿ ಹೆಚ್ಚುತ್ತಿರುವುದು ಗ್ರಾಮಸ್ಥರಿಗೆ ಇನ್ನಷ್ಟು ತಲೆಬಿಸಿ ಉಂಟುಮಾಡಿದೆ.

ನಮ್ಮಲ್ಲಿ ಅನುದಾನವಿಲ್ಲ:

ಮಂಗಗಳ ಹಾವಳಿಯಿಂದ ರೋಸಿಹೋದ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯ್ತಿ, ಅರಣ್ಯ ಇಲಾಖೆ, ಮದ್ದೂರು ತಾಲೂಕು ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದು ಕೋತಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಮನವಿ ಮಾಡಲಾಯಿತು. ಎಲ್ಲರೂ ಅನುದಾನದ ಕೊರತೆಯನ್ನು ಮುಂದಿಡುತ್ತಾ ಕಾಲದೂಡುತ್ತಿದ್ದಾರೆಯೇ ವಿನಃ ಗ್ರಾಮಸ್ಥರಿಂದ ಸಮಸ್ಯೆಗೆ ಪರಿಹಾರ ದೊರಕಿಸುವ ಪ್ರಯತ್ನವನ್ನು ಮಾಡದಿರುವುದು ರೈತರ ಆಕ್ರೋಶಕ್ಕೂ ಕಾರಣವಾಗಿದೆ.

ಮಂಗಗಳು ವನ್ಯಜೀವಿ ವ್ಯಾಪ್ತಿಗೆ ಬರುವುದಿಲ್ಲ:

ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸಲ್ಲಿಸಿದ ಮನವಿಗೆ ಪ್ರತಿಯಾಗಿ ಅಧಿಕಾರಿಗಳು ಮಂಗಗಳು ವನ್ಯಜೀವಿ ಷೆಡ್ಯೂಲ್ ವ್ಯಾಪ್ತಿಗೆ ಬರುವುದಿಲ್ಲ ಜೊತೆಗೆ ಮಂಗಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅನುದಾನದ ಲಭ್ಯತೆ ಇರುವುದಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಮಂಗಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅವಕಾಶವಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಮದ್ದೂರು ವಲಯ ಅರಣ್ಯಾಧಿಕಾರಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಶಶಿಧರ್ ಎಂಬುವರು ಮಂಗಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿ ಮಂಗ ಹಿಡಿಯಲು ೬೦೦ ರು. ವೆಚ್ಚವಾಗುತ್ತದೆ. ಅವರಿಗೆ ಊಟ, ವಸತಿ ವೆಚ್ಚ, ಮಂಗಗಳ ಸಾಗಾಣಿಕೆ ವೆಚ್ಚವನ್ನು ಭರಿಸಬೇಕಿರುತ್ತದೆ. ಅವರನ್ನು ಸಂಪರ್ಕಿಸಿ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಬಹುದು ಎಂದು ಗ್ರಾಮ ಪಂಚಾಯಿತಿಯವರಿಗೆ ಪತ್ರ ಬರೆಯುತ್ತಾರೆ.

೭೦ ಸಾವಿರ ರು. ನೀಡಲಿಲ್ಲ:

ಗ್ರಾಮ ಪಂಚಾಯ್ತಿಯವರು ಇದನ್ನು ಲೆಕ್ಕ ಹಾಕಿ ೭೦ ಸಾವಿರ ರು. ಹಣವನ್ನು ಬಿಡುಗಡೆ ಮಾಡುವಂತೆ ಮದ್ದೂರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಿದ್ದೆಷ್ಟು ಅಷ್ಟೇ. ಅಲ್ಲಿಂದ ಮುಂದೆ ಯಾವುದೇ ಹಣವೂ ಬಿಡುಗಡೆಯಾಗಲೇ ಇಲ್ಲ. ಕೋತಿಗಳ ಹಾವಳಿ ಜಮೀನುಗಳಲ್ಲಿ ಮುಂದುವರಿದೇ ಇದೆ.

ನಿಯಮದಲ್ಲಿ ಏನಿದೆ?:

ಕೋತಿಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆಯ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)ಪ್ರಕಾರ ಸಾಂಪ್ರದಾಯಿಕವಾಗಿ ಕೋತಿಗಳನ್ನು ಹಿಡಿಯುವ ಜನರಿಂದ ಇಲಾಖೆಯ ಸಿಬ್ಬಂದಿಗಳ ಸಮಕ್ಷಮದಲ್ಲಿ ಕೋತಿಗಳಿಗೆ ಯಾವುದೇ ಪ್ರಾಣಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವುದಕ್ಕೆ ಅವಕಾಶವಿದೆ. ಅದಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲಗಳನ್ನು ಸ್ಥಳೀಯ ಸಂಸ್ಥೆಗಳೇ ಭರಿಸತಕ್ಕದ್ದು ಎಂದು ಎಸ್‌ಒಪಿಯ ೧೨ನೇ ಅಂಶದಲ್ಲಿ ತಿಳಿಸಲಾಗಿದೆ.

೨ ಸಾವಿರ ರು. ಕೊಡಲು ಸಿದ್ಧ:

ಈ ಅಂಶದ ಕುರಿತಂತೆ ಬಿದರಕೋಟೆ ಗ್ರಾಪಂ ಸಾಮಾನ್ಯಸಭೆಯಲ್ಲಿ ಚರ್ಚಿಸಿದಾಗ ಒಂದು ಬಾರಿ ಕೋತಿಗಳನ್ನು ಹಿಡಿದು ಹೊರಗೆ ಸಾಗಿಸಲು ಗ್ರಾಪಂ ೨ ಸಾವಿರ ರು. ನೀಡುವುದಕ್ಕೆ ಸಿದ್ಧವಿದೆ. ಉಳಿಕೆ ಅನುದಾನವನ್ನು ರೈತರು, ಸಂಘ-ಸಂಸ್ಥೆಗಳು ಹಾಗೂ ಇತರೆ ಪ್ರಾಧಿಕಾರಗಳಿಂದ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಿ ಕೈತೊಳೆದುಕೊಂಡಿದ್ದಾರೆ.

ಹೀಗೆ ಪ್ರತಿ ಬಾರಿ ಕೋತಿಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದಾಗಲೆಲ್ಲಾ ಒಬ್ಬರ ಮೇಲೊಬ್ಬರು ಹೊಣೆಗಾರಿಕೆಯನ್ನು ಹಾಕುತ್ತಾ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಯೇ ವಿನಃ ರೈತರು ಬೆಳೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಅನುಭವಿಸುತ್ತಿರುವ ನಷ್ಟ ಮಾತ್ರ ಯಾರ ಕಣ್ಣಿಗೂ ಕಾಣದಂತಾಗಿದೆ.ಮಂಗಗಳ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ, ಗ್ರಾಮ ಪಂಚಾಯ್ತಿಗಳಿಗೆ ಏಳು ವರ್ಷಗಳಿಂದ ಮನವಿ ಕೊಟ್ಟು ಸಾಕಾಗಿದೆ. ಯಾರೊಬ್ಬರೂ ಮಂಗಗಳಿಂದ ಆಗುತ್ತಿರುವ ಸಮಸ್ಯೆಗೆ ಪರಿಹಾರ ದೊರಕಿಸಿಲ್ಲ. ಸಾರ್ವಜನಿಕರ ತೆರಿಗೆಯಿಂದ ಹಣಕಾಸಿನ ಸಂಪನ್ಮೂಲ ಸಂಗ್ರಹಿಸುವ ಪಂಚಾಯ್ತಿ ಸಾರ್ವಜನಿಕರ ಸಮಸ್ಯೆ ನಿವಾರಣಾ ಕೆಲಸಕ್ಕೆ ೮೦ ಸಾವಿರ ರು. ಹಣ ಬಳಸದಿರುವುದನ್ನು ನೋಡಿದರೆ ಪಂಚಾಯಿತಿ ಅಷ್ಟೊಂದು ಆರ್ಥಿಕವಾಗಿ ಬಡವಾಗಿದೆಯೇ ಎನಿಸುತ್ತದೆ.

-ಬಿ.ಎಸ್.ನಾಗರಾಜು, ಉಪನ್ಯಾಸಕರು