ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ವರ್ಷ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಜಿಲ್ಲೆಯ ಕಳ್ಳಕೊಳ್ಳ, ನದಿಗಳಲ್ಲಿ ಜಲ ವೈಭವ ಮೇಳೈಸತೊಡಗಿದೆ. ವರುಣ ದೇವನ ಕೃಪೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೋಟೆನಾಡಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.ಜಿಲ್ಲೆಯಲ್ಲಿ 80-10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಗೊಂಡಿದ್ದಾರೆ. ಮುಂಗಾರು ಮಳೆ ವಾಡಿಕೆಗೂ ಮುಂಚೆ ಪ್ರಾರಂಭವಾಗಿದ್ದರಿಂದ ಬಿತ್ತನೆಗೆ ಬೇಕಿರುವ ವಿವಿಧ ರೀತಿಯ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ಜಾಗೃತಿ ವಹಿಸಿದೆ. ಪ್ರಸಕ್ತ ವರ್ಷ 3.06 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಒಂದು ಲಕ್ಷ ಹೆಕ್ಟೇರ್ ಆಸುಪಾಸು ಕಬ್ಬು ಇದ್ದರೆ, ಉಳಿದಂತೆ ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಈರುಳ್ಳಿ, ತೊಗರಿ, ಹೆಸರು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.40 ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಕಳೆದ ಮುಂಗಾರಿನಲ್ಲಿ ಮೆಣಸಿನ ಗಿಡಗಳಿಗೆ ರೋಗ ಬಿದ್ದಿದ್ದರಿಂದ ಮೆಣಸಿನ ಸಸಿ ನಾಟಿ ಮಾಡಿದ್ದ ರೈತರು ಹೆಸರು ಬಿತ್ತನೆ ಮಾಡಿದ್ದರು, ಪರಿಣಾಮ ಇಲಾಖೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಈ ವರ್ಷ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಿದ್ದರೆ, ದ್ವಿದಳ ಧಾನ್ಯಗಳಾದ ತೊಗರಿ 51 ಸಾವಿರ ಹೆಕ್ಟೇರ್, ಹುರುಳಿ ಸಾವಿರ ಹೆಕ್ಟೇರ್, ಹೆಸರು 22,000 ಹೆಕ್ಟೇರ್, ಅಲಸಂದಿ 112 ಹೆಕ್ಟೇರ್, ಮಡಿಕೆ 58 ಹೆಕ್ಟೇರ್, ಉದ್ದು 2,000 ಹೆಕ್ಟೇರ್, ಅವರೆ 100 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ.ಏಕದಳ ಧಾನ್ಯಗಳಾದ ಜೋಳ 200 ಹೆಕ್ಟೇರ್, ಗೋವಿನ ಜೋಳ 59,904 ಹಾಗೂ 22,000 ಹೆಕ್ಟೇರ್ ಸಜ್ಜೆ ಬಿತ್ತನೆಯ ಗುರಿ ಹೊಂದಲಾಗಿದೆ. ಜೊತೆಗೆ ಎಣ್ಣೆ ಕಾಳುಗಳಾದ ಶೇಂಗಾ ಸಾವಿರ ಹೆಕ್ಟೇರ್, ಸೂರ್ಯಕಾಂತಿ 20,000 ಹೆಕ್ಟೇರ್, ಗುರೆಳ್ಳು 4 ಹೆಕ್ಟೇರ್, ಸೋಯಾಬೀನ್ 1400 ಹೆಕ್ಟೇರ್ ಹಾಗೂ ಔಡಲ 20 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುವಂತೆ ರೈತರಲ್ಲೂ ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದ ಅವರು, ಹತ್ತಿ ಸಾವಿರ ಹೆಕ್ಟೇರ್, ಕಬ್ಬು ಪಿ. 20,000 ಹೆಕ್ಟೇರ್ ಹಾಗೂ ಕಬ್ಬು ಎಚ್ 1,03,000 ಹೆಕ್ಟೇರ್ ಗುರಿ ಹೊಂದಲಾಗಿದ್ದು, ಕಬ್ಬು ಈಗಾಗಲೇ ಜಿಲ್ಲೆಯಲ್ಲಿ 1,02,000 ಹೆಕ್ಟೇರ್ ಬೆಳೆ ಇದೆ.
ಮೊಳಕೆ ಕಾಳು ಬಿತ್ತಬಹುದು:ಕೆಲವೊಬ್ಬ ರೈತರು ಬಿತ್ತನೆಗಾಗಿ ವರ್ಷಗಟ್ಟಲೇ ಬೀಜ ಸಂಗ್ರಹಿಸಿಕೊಟ್ಟುಕೊಂಡಿರುತ್ತಾರೆ. ಆದರೆ ಬಿತ್ತುವ ಪೂರ್ವದಲ್ಲಿ ಅವುಗಳನ್ನು ಮೊಳಕೆ ಬರಿಸಬೇಕು. ಕೆ.ಜಿ ಬೀಜದಲ್ಲಿ ಶೇ.80ರಷ್ಟು ಬೀಜ ಮೊಳಕೆಯೊಡೆದರೆ ಮಾತ್ರ ಅವು ಯೋಗ್ಯವಾಗಿವೆ ಎಂದು ಖಾತರಿ ಮಾಡಿಕೊಂಡು ಬಿತ್ತನೆ ಮಾಡಬೇಕು. ಇಲ್ಲದಿದ್ದರೆ ಬಿತ್ತನೆ ಬಳಿಕ ನಾಟಿಯಾಗದೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.6,637 ಕ್ವಿಂಟಾಲ್ ಬೀಜ ವಿತರಣೆಗೆ ಸಿದ್ಧ: ಜಿಲ್ಲೆಯಲ್ಲಿ ರೈತರಿಗೆ ಮುಂಗಾರು ಬಿತ್ತನೆಗೆ ಈಗಾಗಲೆ ಆಯಾ ತಾಲೂಕುಗಳಲ್ಲಿ ಬೀಜ ಶೇಖರಿಸಿಡಲಾಗಿದೆ. ಹೈಬ್ರೀಡ್ ಜೋಳ 1.97 ಕ್ವಿಂಟಾಲ್, ಮುಸುಕಿನ ಜೋಳ 3,307 ಕ್ವಿಂಟಾಲ್, ಸಜ್ಜೆ 156 ಕ್ವಿಂಟಾಲ್, ತೊಗರಿ 1,086 ಕ್ವಿಂಟಾಲ್, ಉದ್ದು 211 ಕ್ವಿಂಟಾಲ್, ಹೆಸರು 305 ಕ್ವಿಂಟಾಲ್, ನೆಲಗಡಲೆ 33.12 ಕ್ವಿಂಟಾಲ್, ಸೂರ್ಯಕಾಂತಿ 151.35 ಕ್ವಿಂಟಾಲ್, ಸೋಯಾ ಅವರೆ 1383.30 ಕ್ವಿಂಟಾಲ್ ಬೀಜ ತಯಾರಿಟ್ಟುಕೊಂಡಿದ್ದು, ಅಗತ್ಯ ಬಿದ್ದಾಗ ಮತ್ತೆ ತರಿಸಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇವುಗಳ ಜೊತೆಗೆ ಯೂರಿಯಾ, ಡಿಎಪಿ, ಕಾಂಪ್ಲೇಕ್ಸ್, ಎಂಒಪಿ, ಎಸ್ಎಸ್ಪಿ ಸೇರಿ ಒಟ್ಟು 66,114 ಮೆಟ್ರಿಕ್ ಟನ್ ಗೊಬ್ಬರಗಳನ್ನು ಪೂರೈಕೆ ಮಾಡಲಾಗಿದ್ದು, ಬೇಡಿಕೆ ಬಂದರೆ ಮತ್ತಷ್ಟು ಗೊಬ್ಬರ ತರಿಸಿಕೊಡಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳೆನ್ನವರ ತಿಳಿಸಿದ್ದಾರೆ.ಕೃಷಿ ಇಲಾಖೆ ನೀಡುವ ವಿವಿಧ ಬೀಜಗಳನ್ನು ಬೀಜೋಪಚಾರ ಮಾಡಿಯೇ ರೈತರಿಗೆ ವಿತರಣೆ ಮಾಡಲಾಗುತ್ತದೆ. ಆದರೆ, ಹೆಚ್ಚಿನ ಪ್ರಮಾಣದ ರೈತರು ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ಖರೀದಿಸುತ್ತಾರೆ. ಕೆಲವು ರೈತರು ತಾವೇ ಬೀಜ ಮಾಡಿಟ್ಟುಕೊಂಡಿದ್ದಾರೆ. ಅವುಗಳನ್ನು ಬಿತ್ತುತ್ತಾರೆ. ಆದರೆ, ಅವರು ಬಿತ್ತುವ ಪೂರ್ವದಲ್ಲಿ ಥೈರಂ ಅಥವಾ ಟ್ರೈಕೋಡರ್ಮಾ ಔಷಧವನ್ನು ಒಂದು ಕೆ.ಜಿ ಬೀಜದಲ್ಲಿ 59 ಗ್ರಾಂ ಮಿಶ್ರಣ ಮಾಡಿ ಬಿತ್ತಿದರೆ ಬಿತ್ತನೆ ಮಾಡಿದ ಬೀಜಗಳಿಗೆ ಕೀಟ ಹತ್ತುವುದನ್ನು ತಡೆಯಲು ಸಾಧ್ಯವಾಗುತ್ತದೆ.
- ಲಕ್ಷ್ಮಣ ಕಳೆನ್ನವರ ಕೃಷಿ ಇಲಾಖೆ ಜಂಟಿ ನಿರ್ದೇಶಕ