''''ಮುಂಗಾರು-ಹಿಂಗಾರು ತಕಟ ಮಸಾನ''''-ವಗ್ಗಯ್ಯನ ನುಡಿ

| Published : May 28 2024, 01:11 AM IST

''''ಮುಂಗಾರು-ಹಿಂಗಾರು ತಕಟ ಮಸಾನ''''-ವಗ್ಗಯ್ಯನ ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು-ಹಿಂಗಾರು ತಕಟ ಮಸಾನ - ಇದು ಚಂದಾಲಿಂಗೇಶ್ವರ ಜಾತ್ರೆಯ ವಗ್ಗಯ್ಯನ ನುಡಿ.

ಹನುಮಸಾಗರ ಚಂದಾಲಿಂಗೇಶ್ವರ ದೇಗುಲದಲ್ಲಿ ಜಾತ್ರೆ

ವಗ್ಗಯ್ಯನ ನುಡಿ ಕೇಳಲು ಸೇರಿದ್ದ ಸಾವಿರಾರು ಭಕ್ತರುಕನ್ನಡಪ್ರಭ ವಾರ್ತೆ ಹನುಮಸಾಗರ

''''ಮುಂಗಾರು-ಹಿಂಗಾರು ತಕಟ ಮಸಾನ'''' - ಇದು ಚಂದಾಲಿಂಗೇಶ್ವರ ಜಾತ್ರೆಯ ವಗ್ಗಯ್ಯನ ನುಡಿ.

ಸಮೀಪದ ಬೆಟ್ಟದ ಮೇಲಿರುವ ಐತಿಹಾಸಿಕ ಕ್ಷೇತ್ರವಾದ ಚಂದಾಲಿಂಗೇಶ್ವರ ದೇಗುಲದಲ್ಲಿ ಭಾನುವಾರ ಜಾತ್ರೆ ಸಂಭ್ರಮದಿಂದ ನಡೆಯಿತು. ವಗ್ಗಯ್ಯನ ನುಡಿ ಕೇಳಲೆಂದೇ ಸಾವಿರಾರು ಸಂಖ್ಯೆಯ ರೈತರು, ಭಕ್ತರು ಸೇರಿದ್ದರು. ಈ ನುಡಿ ಕೇಳಿದ ರೈತರು ಸಂತಸದಿಂದ ಮನೆಗೆ ಮರಳಿದರು.

ಇಲ್ಲಿಯ ವಗ್ಗಯ್ಯನ ನುಡಿಗೆ ರೈತರು ಮಹತ್ವ ನೀಡುತ್ತಾರೆ. ವಗ್ಗಯ್ಯ ನುಡಿ ಹೇಳುವ ಮೊದಲ ಸಮೀಪದ ಕೂಗುಬಸವಣ್ಣನಲ್ಲಿಗೆ ಹೋಗಿ ನುಡಿ ಕೇಳಿಬಂದರು. ಪರಂಪರೆಯಂತೆ ನುಡಿ ಹೇಳುವ ಗಿಡಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಸರಸರನೇ ಮರವೇರಿದರು. ಸ್ಥಳದಲ್ಲಿ ನಿಶ್ಶಬ್ದ ಆವರಿಸಿತು. ವಗ್ಗಯ್ಯ ''''ಮುಂಗಾರು-ಹಿಂಗಾರು ತಕಟ ಮಸಾನ'''' ಎಂದು ಹೇಳಿದರು. ನುಡಿ ಕೇಳುತ್ತಿದ್ದಂತೆ ರೈತರಿಗೆ ಸಂತಸದ ಚಿಲುಮೆ ಮೂಡಿತು.

ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಸಮನಾಗಿ ಆದರೂ ಹಿಂಗಾರಿಗಿಂತ ಮುಂಗಾರು ಬೆಳೆ ಉತ್ತಮ ಫಲ ತರಲಿದೆ ಎಂಬ ಅರ್ಥ ಎಂದು ಹಿರಿಯರು ತಿಳಿಸಿದರು.

ಬಳಿಕ ಕಬ್ಬಿಣ ಸರಪಳಿ ಹರಿಯುವ ಪವಾಡ ಜರುಗಿತು. ಜಾತ್ರೆಯ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಹನುಮಸಾಗರ, ಮನ್ನೇರಾಳ, ಬೀಳಗಿ, ಗುಡೂರ, ದಮ್ಮೂರ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಯರಗೇರಾ ಗ್ರಾಮಗಳ ಭಕ್ತರು ಟಂಟಂ, ಟ್ರ‍್ಯಾಕ್ಟರ್, ಜೀಪು, ದ್ವಿಚಕ್ರ ವಾಹನ, ಸೈಕಲ್, ಕಾಲ್ನಡಿಗೆಗಳ ಮೂಲಕ ದೇಗುಲಕ್ಕೆ ಆಗಮಿಸಿದ್ದರು. ಕುಷ್ಟಗಿ ಬಸ್ ಡಿಪೋದಿಂದ ಭಕ್ತರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.