ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹೀಗೆ ಎರಡು ಪ್ರಕೃತಿಯ ಅತಿರೇಕಗಳಿಂದ ನಲುಗಿದ್ದ ತಾಲೂಕಿನ ರೈತರಿಗೆ ಪ್ರಸಕ್ತ ವರ್ಷ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಮಳೆ ಸುರಿಯುತ್ತಿರುವುದರಿಂದ ರೈತರನ್ನು ಹೊಲಗಳನ್ನು ಹದ ಮಾಡಲು ಮುಂದಾಗಿದ್ದಾರೆ. ಮುಂಗಾರಿನ ಆರಂಭ ಉತ್ತಮವಾಗಿರುವುದರಿಂದ ಸಹಜವಾಗಿ ರೈತರು ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹೀಗೆ ಎರಡು ಪ್ರಕೃತಿಯ ಅತಿರೇಕಗಳಿಂದ ನಲುಗಿದ್ದ ತಾಲೂಕಿನ ರೈತರಿಗೆ ಪ್ರಸಕ್ತ ವರ್ಷ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಮಳೆ ಸುರಿಯುತ್ತಿರುವುದರಿಂದ ರೈತರನ್ನು ಹೊಲಗಳನ್ನು ಹದ ಮಾಡಲು ಮುಂದಾಗಿದ್ದಾರೆ. ಮುಂಗಾರಿನ ಆರಂಭ ಉತ್ತಮವಾಗಿರುವುದರಿಂದ ಸಹಜವಾಗಿ ರೈತರು ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 58.357ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಹೊಂದಲಾಗಿದೆ. ಹಲವೆಡೆ ಈಗಾಗಲೇ ಒಂದೆರಡು ಮಳೆ ಬಿದ್ದಿದ್ದರಿಂದ ನೆಲ ತಂಪಾಗಿದ್ದು, ಕಳೆದ ಮೂರು ತಿಂಗಳಿಂದ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರೈತರು ಜಮೀನುಗಳನ್ನು ಬಿತ್ತನೆಗೆ ಸಿದ್ಧಗೊಳಿಸುವುದರಲ್ಲಿ ನಿರತರಾಗಿದ್ದಾರೆ. ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಹೆಸರು, ಕಬ್ಬು, ಮೆಕ್ಕೆಜೋಳ ಬೆಳೆಯಲು ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಕಳೆದ ಬಾರಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತೊಗರಿ ಕೈಕೊಟ್ಟಿತ್ತು. ಎರಡು ಬಾರಿ ಬಿತ್ತನೆ ಮಾಡಿದರೂ ಮಳೆಯ ಅಭಾವದಿಂದಾಗಿ ರೈತರು ನಷ್ಟದ ಸುಳಿಗೆ ಸಿಲುಕಿದ್ದರು. ತಾಲೂಕಿನ ಹಲವೆಡೆ ರೈತರು ಇಳುವರಿ ಬಾರದೇ ತೀವ್ರ ನಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ರೈತರ ಕೈಗೆ ಹಣ ಸಿಗಲೇ ಇಲ್ಲ. ಸಾಲದ ಮೊತ್ತ ಏರುತ್ತಲೇ ಇತ್ತು. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳು ಬಿಡುಗಡೆ ಮಾಡಿದ್ದರಿಂದ ರೈತರಿಗೆ ಒಂದಷ್ಟು ಸಮಾಧಾನ ತಂದಿದೆ. ಆದಕಾರಣ ಬೀಜ, ರಸಗೊಬ್ಬರವನ್ನು ಖರೀದಿಸಲು ಮುಂದಾಗಿದ್ದಾರೆ. ಅದರಲ್ಲೂ ಈ ಬಾರಿ ಹತ್ತಿಯನ್ನು ಸರ್ಕಾರ ಬೆಂಬಲ ಬೆಲೆ ₹ 8450 ಗೆ ಘೋಷಣೆಯಿಂದ ರೈತರು ಹತ್ತಿ ಬೆಳೆ ಕಡೆಗೆ ಒಲವು ತೋರುತ್ತಿದ್ದಾರೆ.ವಾಡಿಕೆಗಿಂತಲೂ ಹೆಚ್ಚು ಮಳೆ:
ವಾಡಿಕೆಯಂತೆ ಜೂ.7ವರೆಗೆ 95.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈಗ 7 ರವರೆಗೆ 129.9 ಮಿ.ಮೀ.ಮಳೆ ಸುರಿದಿದೆ. ಈ ವರೆಗೆ ಶೇ.39 ರಷ್ಟು ಮಳೆ ಹೆಚ್ಚಾಗಿದೆ ಇದು ರೈತರಿಗೆ ಉತ್ಸಾಹ ತಂದಿದ್ದು, ಇದರಿಂದಾಗಿ ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಅಲ್ಲದೇ, ತಾಲೂಕಿನಲ್ಲಿ ಕೃಷಿ ಇಲಾಖೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು 58,357 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. 37,635 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 15,150 ಹೆಕ್ಟೇರ್‌ನಲ್ಲಿ ಹತ್ತಿ, 3298 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 1718 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 726 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 67 ಹೆಕ್ಟೇರ್‌ನಲ್ಲಿ ಶೇಂಗಾ, 194 ಹೆಕ್ಟೇರ್‌ನಲ್ಲಿ ಸಜ್ಜಿ ಸೇರಿದಂತೆ ತೋಟಗಾರಿಕೆ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆ ಇಲ್ಲ: ತಾಲೂಕಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳ ದಾಸ್ತಾನು ಇದೆ. ಉತ್ತಮ ಮಳೆ ಆಗುತ್ತಿದ್ದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯ ಧನದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದೆಂದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
-----ಕೋಟ್.....
ರೈತರಿಗೆ ಬೇಕಾದ ಬೀಜ ರಸಗೊಬ್ಬರದ ಸಮಸ್ಯೆ ಆಗದ ರೀತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ರೈತರಿಂದ ಹೆಚ್ಚು ಬೇಡಿಕೆ ಬಂದಲ್ಲಿ ಮತ್ತಷ್ಟು ಬೀಜ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದಲ್ಲಿ ಪ್ರವಾಹ ಸೇರಿದಂತೆ ಮಳೆಯ ಅವಘಡಗಳನ್ನು ಎದುರಿಸಲು ಸಕಲ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.-ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು
-------ಕೋಟ್
ಈ ವರ್ಷ 58,357 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಮುಂಗಾರುಪೂರ್ವ ಉತ್ತಮ ಮಳೆಯಾಗಿರುವುದರಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ತಾಲೂಕಿನಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ. ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬೀಜ, ಗೊಬ್ಬರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.-ಶರಣಗೌಡ ಬಿರಾದಾರ. ಕೃಷಿ ಇಲಾಖೆ ಅಧಿಕಾರಿ