ಮುಂಗಾರು ಹೋಯ್ತು, ಹಿಂಗಾರು ಬಿತ್ತನೆಗೂ ಬರ!

| Published : Dec 11 2023, 01:15 AM IST

ಸಾರಾಂಶ

ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದು, ಹಿಂಗಾರು ಬಿತ್ತನೆಗೂ ಈಗ ಬರಸಿಡಿಲು ಎರಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ. 50ರಷ್ಟೂ ಬಿತ್ತನೆ ಆಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಅಕ್ಟೋಬರ್‌ನಲ್ಲಿ ಹಿಂಗಾರು ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಹಿಂಗಾರು ಮಳೆಯೂ ಕಾಲಕ್ಕೆ ತಕ್ಕಂತೆ ಬಾರದ ಹಿನ್ನೆಲೆ ನವೆಂಬರ್‌ನಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ನವೆಂಬರ್‌ನಲ್ಲಿ ಭರವಸೆ ಮೂಡಿಸಿದ್ದ ಮಳೆರಾಯನನ್ನು ನಂಬಿದ ರೈತರು ಜಿಲ್ಲೆಯಲ್ಲಿ ಜೋಳ, ಗೋವಿನಜೋಳ, ಗೋದಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಇತರ ಬೀಜ ಬಿತ್ತನೆ ಮಾಡಿದ್ದಾರೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದು, ಹಿಂಗಾರು ಬಿತ್ತನೆಗೂ ಈಗ ಬರಸಿಡಿಲು ಎರಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ. 50ರಷ್ಟೂ ಬಿತ್ತನೆ ಆಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಕ್ಟೋಬರ್‌ನಲ್ಲಿ ಹಿಂಗಾರು ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಹಿಂಗಾರು ಮಳೆಯೂ ಕಾಲಕ್ಕೆ ತಕ್ಕಂತೆ ಬಾರದ ಹಿನ್ನೆಲೆ ನವೆಂಬರ್‌ನಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ನವೆಂಬರ್‌ನಲ್ಲಿ ಭರವಸೆ ಮೂಡಿಸಿದ್ದ ಮಳೆರಾಯನನ್ನು ನಂಬಿದ ರೈತರು ಜಿಲ್ಲೆಯಲ್ಲಿ ಜೋಳ, ಗೋವಿನಜೋಳ, ಗೋದಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಇತರ ಬೀಜ ಬಿತ್ತನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,11,745 ಹೆಕ್ಟೇರ್ ಹಿಂಗಾರಿ ಬಿತ್ತನೆ ಗುರಿ ಹೊಂದಿದ್ದರೂ ಸಹ ಮಳೆ ಕೊರತೆ ಕಾರಣ ಕೇವಲ 53,388 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ. 47.78ರಷ್ಟು ಸಾಧನೆಯಾಗಿದೆ. ನವೆಂಬರ್‌ನಲ್ಲಿ ಹಲವೆಡೆ ಅಲ್ಪ ಮಳೆ ಆಗಿದ್ದರೂ ಬಹುತೇಕ ಭಾಗಗಳಲ್ಲಿ ಮಳೆಯೇ ಆಗಿಲ್ಲ. ಇದರಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಬೋರ್‌ವೆಲ್‌ಗಳು ಬತ್ತುತ್ತಿವೆ. ಕೊಳವೆಬಾವಿ ನೀರಾವರಿ ಸೌಲಭ್ಯವಿರುವ ರೈತರೂ ಹಿಂಗಾರು ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಹಲವೆಡೆ ಬಿತ್ತಿದ ಬೀಜಗಳು ಮೊಳಕೆಯೊಡೆದಿಲ್ಲ. ಕೆಲವೆಡೆ ಸಸಿಗಳು ಒಣಗುತ್ತಿವೆ.

ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ್ದ ಯಾವ ಬೆಳೆಗಳೂ ಕೈಸೇರಿಲ್ಲ. ಬಿತ್ತನೆಗೆ ಖರ್ಚು ಮಾಡಿದ ಹಣವೂ ಕೈಗೆ ಬರಲಿಲ್ಲ. ಬರ ಪರಿಹಾರ ಬಿಡುಗಡೆಗೂ ಸರ್ಕಾರಗಳು ಮನಸು ಮಾಡುತ್ತಿಲ್ಲ. ಇದರಿಂದ ರೈತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಆದ್ದರಿಂದ ಸರ್ಕಾರಗಳು ರೈತರ ನೆರವಿಗೆ ಬರಬೇಕಿದೆ.

ಮಳೆ ಮಾಯ:

ಈ ವರ್ಷ ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಮಳೆ ಮಾಯವಾಗಿದೆ. ಇದರಿಂದ ಈಗಲೇ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ಜಿಲ್ಲೆಯ ರೈತರು ಈ ಸಲ ಅನಾವೃಷ್ಟಿಯಿಂದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಮುಂಗಾರು ಜತೆಗೆ ಹಿಂಗಾರು ಮಳೆಗೂ ಬರ ಬಿದ್ದಿದೆ. ಅಕ್ಟೋಬರ್‌ನಲ್ಲಿ 110.70 ಮಿಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ವಾಸ್ತವವಾಗಿ 19 ಮಿಮೀ ಮಳೆ ಮಾತ್ರ ಸುರಿದಿದೆ. ನವೆಂಬರ್‌ನಲ್ಲಿ 48.80 ಮಿಮೀ ಮಳೆ ಆಗಬೇಕಿತ್ತು, ಆದರೆ, 50.50 ಮಿಮೀ ಮಳೆಯಾಗಿತ್ತು. ಡಿಸೆಂಬರ್‌ನಲ್ಲಿ 8.70 ಮಿಮೀ ಮಳೆಯಾಗಬೇಕಿದೆ. ಆದರೆ, ಮೊದಲ ವಾರದಲ್ಲಿ ಎಲ್ಲಿಯೂ ಮಳೆ ಸುರಿದ ವರದಿಯಾಗಿಲ್ಲ. ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಶೇ. 68ರಷ್ಟು ಮಳೆ ಕೊರತೆಯಾಗಿದೆ. ಸದ್ಯ ಮಳೆಯಾಗುವ ಲಕ್ಷಣವೂ ಗೋಚರಿಸುತ್ತಿಲ್ಲ. ಇದು ಅನ್ನದಾತನ ಆತಂಕಕ್ಕೆ ಕಾರಣವಾಗಿದೆ.

ಮಳೆಯೊಂದಿಗೆ ಚಳಿ ವಾತಾವರಣವೂ ಇಲ್ಲದ್ದರಿಂದ ಬಿಳಿ ಜೋಳ ಮುಂತಾದ ಬೆಳೆ ಫಸಲು ಬರುತ್ತಿಲ್ಲ. ಚೆನ್ನಾಗಿ ಚಳಿ ಬಿದ್ದಿದ್ದರೆ ಇಬ್ಬನಿಗೇ ಜೋಳ ಬೆಳೆದು ತೆನೆ ಕಟ್ಟುತ್ತಿತ್ತು. ಆದರೆ, ಅಲ್ಪ ಚಳಿ ಬೀಳುತ್ತಿದ್ದರೂ ಇಬ್ಬನಿ ಬೀಳುತ್ತಿಲ್ಲ.

ಈ ಸಲ ಮುಂಗಾರು ಕೈಕೊಟ್ಟಿದ್ದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಹಿಂಗಾರು ಕೂಡ ಕೈಕೊಟ್ಟಿದೆ. ನೀರಾವರಿ ಸೌಲಭ್ಯ ಇರುವವರೇ ಬೆಳೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಈ ವರ್ಷದ ಬರಗಾಲ ರೈತರನ್ನು ಸಂಪೂರ್ಣವಾಗಿ ಜರ್ಝರಿತಗೊಳಿಸಿದೆ. ಯಾವ ಬೆಳೆಯೂ ರೈತರ ಕೈಗೆ ಸೇರುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ಸರ್ಕಾರವೇ ರೈತರ ನೆರವಿಗೆ ಬರಬೇಕು. ಅದಕ್ಕಿಂತ ಮೊದಲು ಬೆಳೆ ನಷ್ಟ ಪರಿಹಾರವನ್ನು ತಕ್ಷಣ ರೈತರಿಗೆ ನೀಡಬೇಕು ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

ಹಿಂಗಾರು ಬಿತ್ತನೆ ಅಕ್ಟೋಬರ್‌ನಲ್ಲಿ ಆರಂಭವಾಗಬೇಕಿತ್ತು. ಮಳೆ ಕೊರತೆಯಿಂದ ನವೆಂಬರ್‌ನಲ್ಲಿ ಆರಂಭವಾಗಿದೆ. ಹಿಂಗಾರು ಬೆಳೆಗಳ ಸ್ಥಿತಿ ಸದ್ಯಕ್ಕೆ ಚೆನ್ನಾಗಿದೆ. ಮಳೆ ಜತೆಗೆ ಇಬ್ಬನಿ ಕಡಿಮೆಯಾದ್ದರಿಂದ ಮಳೆಯಾಶ್ರಿತ ರೈತರಿಗೆ ಸಮಸ್ಯೆಯಾಗಿದೆ. ಇಲಾಖೆಯಿಂದ ರೈತರಿಗೆ ಅಗತ್ಯ ಸಲಹೆ, ಸಹಕಾರ ನೀಡಲಾಗುತ್ತಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ.ಬಿತ್ತನೆ ಅಂಕಿ- ಅಂಶ (ಹೆಕ್ಟೇರ್‌ಗಳಲ್ಲಿ)

ಬೆಳೆ ಒಟ್ಟು ಗುರಿ ಸಾಧನೆ

ಜೋಳ 49,868 26,213

ಮೆಕ್ಕೆಜೋಳ 36,184. 14,191

ಕಡಲೆ 3,558. 3,312

ಸೂರ್ಯಕಾಂತಿ 3,249 1,023

ಇತರ ಬೆಳೆ 18,896 9,672

ಒಟ್ಟು 1,11,745 53,388