ತಲಕಾಡಿನ ಸುತ್ತ ಹಸಿರಿಗೆ ಉಸಿರು ನೀಡಿದ ಮುಂಗಾರು ಮಳೆ

| Published : Jun 17 2024, 01:35 AM IST

ಸಾರಾಂಶ

ತಲಕಾಡು ಹೋಬಳಿಯ ಸುತ್ತ ಸುರಿದ ಮೊದಲ ಮುಂಗಾರು ಮಳೆಗೆ, ಹಸಿರು ಸೀರೆ ಹೊದ್ದ ಭೂರಮೆ ಚೆಲುವು, ಪ್ರಕೃತಿ ಪ್ರಿಯರಲ್ಲಿ ನವೋಲ್ಲಾಸ ಸಂತಸ ಮೂಡಿಸಿದೆ.

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡು ಹೋಬಳಿಯ ಸುತ್ತ ಸುರಿದ ಮೊದಲ ಮುಂಗಾರು ಮಳೆಗೆ, ಹಸಿರು ಸೀರೆ ಹೊದ್ದ ಭೂರಮೆ ಚೆಲುವು, ಪ್ರಕೃತಿ ಪ್ರಿಯರಲ್ಲಿ ನವೋಲ್ಲಾಸ ಸಂತಸ ಮೂಡಿಸಿದೆ.

4 ತಿಂಗಳು ಹೋಬಳಿ ಜನತೆಗೆ ನರಕಾನುಭವ ನೀಡಿದ್ದ ಈ ಬಾರಿಯ ರಣಬಿಸಿಲಿನ ಕಾಲ ಈಗಷ್ಟೇ ಮುಗಿದಿದೆ. ಮಳೆಯಿಲ್ಲದೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದವರಿಗೆ, ಮುಂಗಾರು ಮಳೆಗಾಲ ಹಸಿರು ಸಿರಿಗೆ ವರದಾನ ನೀಡಿದೆ.

ನೀರಡಿಕೆ ನೀಗಿಸಿದ ಮಳೆ:

ಬೇಸಾಯ ಚಟುವಟಿಕೆ ಸೇರಿ ವ್ಯಾಪಾರ, ಮದುವೆ ಚಟುವಟಿಕೆಗಳು ಗರಿಗೆದರಿವೆ. ಬರಗಾಲದ ಬೇಗೆಯಲ್ಲಿ ಮಾಯವಾಗಿದ್ದ ಹಸಿರು ಈಗ ಪ್ರತ್ಯಕ್ಷವಾಗಿ ಹಸಿರು ಆರಾಧಕರ ಕಣ್ಮನ ಸೆಳೆಯುತ್ತಿದೆ. ಬರಡಾಗಿದ್ದ ಕೆರೆಕಟ್ಟೆಗಳಲ್ಲಿ ನೀರು ಶೇಖರಣೆಗೊಂಡು ಪಶು-ಪಕ್ಷಿಗಳಿಗೆ ನೀರಡಿಕೆ ನೀಗಿಸಿದೆ.

ಪ್ರವಾಸಿಗರ ಆಗಮನ ಕ್ಷೀಣ:

ಬೇಸಿಗೆ ಶಾಲಾ ರಜಾ ದಿನಗಳು ಮುಕ್ತಾಯಗೊಂಡಿದ್ದು, ಪ್ರವಾಸಿಗರ ನೆಚ್ಚಿನ ತಾಣ ನದಿ ತೀರದ ನಿಸರ್ಗಧಾಮಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆ ಸರ್ಕಾರಿ ರಜಾ ದಿನ ಹೊರತು ಪಡಿಸಿ ಬೇರೆ ದಿನಗಳಲ್ಲಿ ತೀರಾ ಕಡಿಮೆಯಾಗಿದೆ.

ಹೀಗಾಗಿ ಇಲ್ಲಿ ತ್ಯಾಜ್ಯ ಸೇರುವುದು ಕೂಡ ಕಡಿಮೆಯಾಗಿದೆ. ನಸುಕಿನಲ್ಲಿ ಪ್ರತಿಬಿಂಬ ಕಾಣುವಷ್ಟು ನದಿನೀರು ತಿಳಿ ಸ್ವಚ್ಛವಾಗಿ ಸ್ವಚ್ಛಂದವಾಗಿ ಇಲ್ಲಿ ಹರಿಯುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಒಣಗಿ ಕಟ್ಟಿಗೆಯಂತಾಗಿದ್ದ ಅರಣ್ಯ ನಿಸರ್ಗ ಧಾಮದ ಮರ- ಗಿಡಗಳು, ಮುಂಗಾರು ಮಳೆಯ ಅಮೃತ ಸಿಂಚನದಲ್ಲಿ ಮಿಂದೆದ್ದು ಹಚ್ಚ ಹಸಿರಿನಿಂದ ನಳನಳಿಸುತ್ತಿವೆ.

ಈ ಬಾರಿಯ ಮುಂಗಾರು ಪ್ರವೇಶದ ದಿನಗಳಲ್ಲಿ ಬೀಸಿದ ಭಾರೀ ಬಿರುಗಾಳಿ ಸಮೇತ ಮಳೆಗೆ, ಹೋಬಳಿಯ ಬೃಹತ್ ಸಂಖ್ಯೆಯಲ್ಲಿ ಮರಗಳು ಧರೆಗುರುಳಿದ್ದವು. ಕಳೆದ ವರ್ಷ ಧರೆಗುರುಳಿದ ಮರಗಳ ಹರಾಜು ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಈ ಬಾರಿ ನೆಲಕ್ಕೊರಗಿದ ಮರಗಳ ಹರಾಜಿಗೆ ಸಿದ್ಧತೆ ನಡೆಸಿದ್ದಾರೆ.

ಕೃಷಿ ಚಟುವಟಿಕೆ ಚುರುಕು:

ಮೊದಲ ಮುಂಗಾರು ಮಳೆಗೆ ದ್ವಿದಳ ಧಾನ್ಯ ಬಿತ್ತನೆ ಚಟುವಟಿಕೆ ಪ್ರಾರಂಭಿಸಿದ್ದ ರೈತರ ಭೂಮಿಯ ಬೆಳೆಗಳು ಹುಲುಸಾಗಿದ್ದರೆ, ಹಳ್ಳದ ಭೂಮಿಯಲ್ಲಿ ಮಳೆ ಶೈತ್ಯಾಂಶ ಹೆಚ್ಚಾಗಿ ಕೆಲವು ಕಡೆ ಕೊಳೆ ರೋಗಕ್ಕೆ ಸಿಲುಕಿವೆ. ತಡವಾಗಿ ಶುರುವಾದ ಕೃಷಿ ಚಟುವಟಿಕೆಗೆ ಈಗಷ್ಟೇ ಉಳುಮೆಗೆ ಮುಂದಾಗಿರುವ ರೈತರು ಬಿತ್ತನೆಗೆ ಸಜ್ಜುಗೊಳಿಸಲು ಭೂಮಿ ಹಸನು ಮಾಡಿಕೊಳ್ಳುವ ಬಿರುಸಿನ ಸಿದ್ಧತೆ ನಡೆಸಿದ್ದಾರೆ.

ಪಂಪ್ ಸಟ್ ಆಶ್ರಯದಲ್ಲಿ ಅಲ್ಲಲ್ಲಿ ಬೆಳೆದ ಭತ್ತದ ಬೆಳೆಗೆ ಕಾಳು ಕಟ್ಟಲು ಮಳೆ ನೆರವಾಗಿದೆ. ಮುಂಚಿತವಾಗಿ ಭತ್ತದ ನಾಟಿ ಮಾಡಿದ್ದ ಗದ್ದೆಗಳಲ್ಲಿ ಈಗಾಗಲೇ ಯಂತ್ರಗಳ ಮೂಲಕ ಕಟಾವು ಕಾರ್ಯ ಬಿರುಸಿನಿಂದ ಸಾಗಿದೆ. ಸತತ ಮಳೆಯಿಂದಾಗಿ ಕಟ್ಟಡ ನಿವಾಸಗಳ ಮೇಲಿನ ಧೂಳು ರಸ್ತೆ ಹಾಗೂ ಚರಂಡಿಯಲ್ಲಿದ್ದ ಕೊಳೆ ತೊಳೆದು ಸ್ವಚ್ಛಂದವಾಗಿಸಲು ನೆರವಾಗಿದೆ.