ಸಾರಾಂಶ
ಗದಗ ನಗರ ಹಾಗೂ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 20 ನಿಮಿಷಕ್ಕೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.
ಗದಗ/ಲಕ್ಷ್ಮೇಶ್ವರ: ಗದಗ ನಗರ ಹಾಗೂ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 20 ನಿಮಿಷಕ್ಕೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.
ಮಳೆಯೊಂದಿಗೆ ಬೀಸಿದ ಗಾಳಿ ಹಾಗೂ ಗುಡುಗು ಸಿಡಿಲಿನ ಅಬ್ಬರ ಜೋರಾಗಿತ್ತು.ಲಕ್ಷ್ಮೇಶ್ವರ ತಾಲೂಕಿನಲ್ಲಿ ಎರಡು ದಿನಗಳಿಂದ ಮುಂಗಾರು ಪೂರ್ವ ಮಳೆಯು ಚುರುಕಾಗಿದ್ದು. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಿಂಗಾರು ಹಂಗಾಮಿನಲ್ಲಿ ಹೊಲಗಳನ್ನು ಹಸನು ಮಾಡಿಟ್ಟುಕೊಂಡು ಮುಂಗಾರು ಮಳೆಗಾಗಿ ಕಾಯುತ್ತಿರುವ ರೈತರಿಗೆ ಈ ಮಳೆ ಸಂತಸ ತಂದಿದೆ.ತಾಲೂಕಿನಲ್ಲಿ ಗುರುವಾರ ತಡರಾತ್ರಿ ಒಂದು ತಾಸಿಗೂ ಹೆಚ್ಚು ಕಾಲ ಮಳೆ ಸುರಿದಿದೆ ಹಾಗೂ ಶುಕ್ರವಾರ ಸಂಜೆ ಮತ್ತು ರಾತ್ರಿ ವೇಳೆ ಮುಂಗಾರು ಮಳೆ ಸುರಿಯುವ ಮೂಲಕ ಬೇಸಿಗೆಯಲ್ಲಿ ಬೆಂದು ಹೋಗುತ್ತಿರುವ ಜನಸಾಮಾನ್ಯರಿಗೆ ತಂಪೆರೆದಿದೆ. ಮುಂಗಾರು ಹಂಗಾಮಿನಲ್ಲಿ ಸುರಿಯುವ ಮಳೆಯಿಂದ ಹುಲ್ಲು ಬೀಜಗಳು ಮೊಳಕೆಯೊಡೆದು ಬೆಳೆಯುತ್ತವೆ. ಮಳೆ ಕಡಿಮೆಯಾದ ಮೇಲೆ ಹೊಲವನ್ನು ಹರಗುವ ಮೂಲಕ ಹುಲ್ಲಿನ ಪ್ರಮಾಣ ಕಡಿಮೆ ಮಾಡುತ್ತವೆ. ಹೀಗಾಗಿ ಈ ಮಳೆಗಳು ರೈತ ಸ್ನೇಹಿ ಎಂದು ಎನಿಸಿಕೊಂಡಿವೆ. ತಾಲೂಕಿನ ರಾಮಗೇರಿ, ದೊಡ್ಡೂರ, ಸೂರಣಗಿ, ಗೋವನಾಳ, ಗೊಜನೂರ, ಅಡರಕಟ್ಟಿ, ಪು,ಬಡ್ನಿ, ಹುಲ್ಲೂರು. ಶೆಟ್ಟಿ ಕೇರಿ, ಅಕ್ಕಿಗುಂದ ಮಾಡಳ್ಳಿ, ಯಳವತ್ತಿ ಗ್ರಾಮದಲ್ಲಿ ಉತ್ತಮ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ.ಒಟ್ಟಿನಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮುಂಗಾರು ಪೂರ್ವ ಮಳೆಗಳು ರೈತರಿಗೆ ಖುಷಿ ತಂದಿವೆ ರೈತ ಚನ್ನಪ್ಪ ಷಣ್ಮುಖಿ ಹೇಳಿದರು.