ಕೊಂಚ ಬಿಡುವು ನೀಡಿದ್ದ ಮುಂಗಾರು ಅಬ್ಬರ ಮತ್ತೆ ಚುರುಕುಗೊಂಡಿದೆ. ರಾಜ್ಯಾದ್ಯಂತ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಆರಿದ್ರ ಮಳೆ ಸುರಿದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಕೊಂಚ ಬಿಡುವು ನೀಡಿದ್ದ ಮುಂಗಾರು ಅಬ್ಬರ ಮತ್ತೆ ಚುರುಕುಗೊಂಡಿದೆ. ರಾಜ್ಯಾದ್ಯಂತ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಆರಿದ್ರ ಮಳೆ ಸುರಿದಿದೆ. ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಶಾಲೆಗೆ ರಜೆ ಮತ್ತು ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಶಾಲೆ ಕಾಲೇಜುಗಳಿಗೆ ಜೂ.25ರಂದು ರಜೆ ಘೋಷಿಸಲಾಗಿದೆ. ಬೆಳಗಾವಿ, ಕೊಡಗು, ಹಾಸನ, ಚಿಕ್ಕಮಗಳೂರು, ಸೇರಿದಂತೆ ಹಲವೆಡೆ ಧಾರಕಾರ ಮಳೆ ಸುರಿದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾಗಿದ್ದು, ಮಳೆಗೆ ಹೇಮಾವತಿ ನದಿಯ ಒಡಲು ತುಂಬಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಸಕಲೇಶಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಬುಧವಾರ ಕಾಲೇಜು ಹೊರತುಪಡಿಸಿ ಶಾಲೆಗೆ ಮಾತ್ರ ರಜೆ ನೀಡಲಾಗಿದೆ. ಬೆಳಗಾವಿ ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿತ್ತು. ಖಾನಾಪುರದಲ್ಲಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಅಂಗನವಾಡಿ ,ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜೂ.25ರಂದು ರಜೆ ಘೋಷಿಸಲಾಗಿದೆ. ಹಬ್ಬನಹಟ್ಟಿಯ ಆಂಜನೇಯ ಮಂದಿರ, ಇಟಗಿಯ ಮರುಳಶಂಕರ ಮಂದಿರಗಳು ಮಲಪ್ರಭಾ ನದಿಯಲ್ಲಿ ಮುಳುಗಡೆಗೊಂಡಿವೆ.ಕೆಆರ್‌ಎಸ್ ಭರ್ತಿಗೆ ಕೇವಲ 3 ಅಡಿ ಬಾಕಿ:
ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲಿ ಮತ್ತೆ 4 ಸಾವಿರ ಕ್ಯುಸೆಕ್‌ನಷ್ಟು ನೀರು ಹೆಚ್ಚಳವಾಗಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ 121.40 ಅಡಿ ದಾಖಲಾಗಿದೆ. ಜಲಾಶಯದ ಭರ್ತಿಗೆ ಕೇವಲ ಮೂರು ಅಡಿ ಬಾಕಿ ಇದೆ. ಜಲಾಶಯಕ್ಕೆ 17560 ಕ್ಯುಸೆಕ್ ನೀರು ಹರಿದುಬರುತ್ತಿದ್ದು, 8729 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಸದ್ಯ ಅಣೆಕಟ್ಟೆಯಲ್ಲಿ 35.662 ಟಿಎಂಸಿ ನೀರು ಸಂಗ್ರಹವಾಗಿದೆ.3-4 ದಿನ ರಾಜ್ಯದಲ್ಲಿ ಧಾಕಾಕಾರ ಮಳೆ:ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿಯ ಮೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಕ್ಕೆ ಆರೆಂಜ್ ಅಲರ್ಟ್ ಹಾಗೂ ನಂತರದ ನಂತರದ ಎರಡು ದಿನಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಉತ್ತರ ಒಳನಾಡಿನ, ಬಾಗಲಕೋಟೆ, ಬೆಳಗಾವಿ, ಧಾರವಾಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ ಮೂರು ದಿನಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದ್ದು, 6 ರಿಂದ 11 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಮುಂದುವರೆಯಲಿದೆ. ಅಲ್ಲಲ್ಲಿ ಧಾರಾಕಾರವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಹವಾಮಾನ ವರದಿ ಪ್ರಕಾರ ಉಡುಪಿಯ ಸಿದ್ದಾಪುರದಲ್ಲಿ 24 ಗಂಟೆಯಲ್ಲಿ ಅತಿ ಹೆಚ್ಚು 13 ಸೆಂ.ಮೀ. ಮಳೆಯಾಗಿದೆ. ಕ್ಯಾಸಲ್ ರಾಕ್, ಖಾನಾಪುರದಲ್ಲಿ ತಲಾ 10, ಆಗುಂಬೆ 9, ಸೋಮವಾರಪೇಟೆ, ಕದ್ರಾ, ಲೋಂಡಾದಲ್ಲಿ ತಲಾ 8, ಬನವಾಸಿ 7, ಧರ್ಮಸ್ಥಳ, ಯಲ್ಲಾಪುರ, ಕಳಸ, ಹುಂಚದಕಟ್ಟೆಯಲ್ಲಿ ತಲಾ 6, ಶೃಂಗೇರಿ, ಬೆಳ್ತಂಗಡಿ, ಕಾರ್ಕಳ, ಉಪ್ಪಿನಂಗಡಿ, ಮೂಡಬಿದರೆ, ಅಂಕೋಲಾ, ಕುಂದಾಪುರ, ಕಮ್ಮರಡಿಯಲ್ಲಿ ತಲಾ 5, ಬಂಟ್ವಾಳ, ಕಾರವಾರ, ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 4, ಕೊಪ್ಪ, ಭರಮಸಾಗರ, ಮಾಣಿ, ಬೆಳಗಾವಿ, ಉಡುಪಿ, ಕೋಟಾ ಸೇರಿ ಮೊದಲಾದ ಭಾಗದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.