ಪೊನ್ನಂಪೇಟೆ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಶೀಘ್ರ ಆರಂಭವಾಗುವ ಲಕ್ಷಣಗಳು ಕಾಣುತ್ತಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದ್ದಾರೆ. ಪೊನ್ನಂಪೇಟೆಯ ತಾ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯ ಅಲ್ಲಲ್ಲಿ ಗಾಳಿ ಮಳೆಗೆ ಮರದ ಕೊಂಬೆಗಳು ಬೀಳುತ್ತಿದ್ದು, ಇದರಿಂದ ವಿದ್ಯುತ್ ಹಾಗೂ ಸಾರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ರಸ್ತೆ ಬದಿ ಬೀಳುವ ಕೊಂಬೆಗಳನ್ನು ಕಡಿಯುವುದು, ಚರಂಡಿ ಹೂಳು ತೆಗೆಯುವುದು, ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವುದು, ಮತ್ತಿತರ ಅಗತ್ಯ ಕ್ರಮವಹಿಸುವಂತೆ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದಲ್ಲಿ ತಳಮಟ್ಟದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಬೇಕು ಎಂದು ಶಾಸಕರು ತಾಕೀತು ಮಾಡಿದರು.
ಸಾರ್ವಜನಿಕರು ಗ್ರಾಮದ ಮಟ್ಟದಲ್ಲಿ ಆಗಬೇಕಿರುವ ಸಣ್ಣ ಪುಟ್ಟ ಕೆಲಸಗಳಿಗೂ ನನ್ನ ಬಳಿಗೆ ಆಗಮಿಸುತ್ತಾರೆ. ಆದ್ದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಸಂಬಂಧಪಟ್ಟ ಎಂಜಿನಿಯರ್ ಅಥವಾ ಅಧಿಕಾರಿಗಳ ಗಮನಕ್ಕೆ ತಂದರೆ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಒತ್ತಿ ಹೇಳಿದರು. ಅಂಗನವಾಡಿ, ಶಾಲಾ-ಕಾಲೇಜುಗಳ ಕಟ್ಟಡಗಳು ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿದ್ದರೆ ವರದಿ ನೀಡುವಂತೆ ಸೂಚಿಸಿದರು. ವಿದ್ಯುತ್ ಹಳೆಯ ಕಂಬಗಳನ್ನು ಬದಲಿಸುವುದು, ವಿದ್ಯುತ್ ಪರಿವರ್ತಕಗಳನ್ನು ದಾಸ್ತಾನು ಮಾಡಿಕೊಂಡು ಅಳವಡಿಸುವುದು ಮತ್ತಿತರ ಕಾರ್ಯದ ಬಗ್ಗೆ ಸೆಸ್ಕ್ ಇಲಾಖೆ ಎಂಜಿನಿಯರ್ ಗಮನಹರಿಸುವಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಪರಿಹರಿಸುವಂತಾಗಬೇಕು. ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಹೆಚ್ಚಿನ ಗಮನ ನೀಡಬೇಕು ಎಂದರು. ರಸ್ತೆ ಬದಿಯ ಗಿಡಗಂಟೆಗಳನ್ನು ಕಡಿಯದಿದ್ದಲ್ಲಿ ಸೆಸ್ಕ್, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗೆ ಕೆಲಸ ಹೆಚ್ಚಾಗಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ಕೆಲಸವನ್ನು ಶೀಘ್ರ ಪೂರ್ಣಗೊಳಿಸುವಂತೆ ಶಾಸಕರು ನಿರ್ದೇಶನ ನೀಡಿದರು. ಹೆಚ್ಚಿನ ಮಳೆಯಿಂದಾಗಿ ಮನೆ ಹಾನಿಯಾದಲ್ಲಿ ಕೂಡಲೇ ಪರಿಹಾರ ವಿತರಿಸಲು ಕ್ರಮವಹಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಆಹಾರಧಾನ್ಯವನ್ನು ಸಮರ್ಪಕವಾಗಿ ಪೂರೈಸಬೇಕು. ನದಿ, ಹೊಳೆ ಬದಿಯಲ್ಲಿ ವಾಸಿಸುವ ಕುಟುಂಬಗಳಿಗೆ ಮುನ್ನೆಚ್ಚರಿಕೆಯಾಗಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಇರಬೇಕು ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್ ಅವರು ಶ್ರೀಮಂಗಲ ಆಸ್ಪತ್ರೆಯಲ್ಲಿ ಜ್ವರದ ಔಷಧಿಯೇ ಇಲ್ಲ. ಈ ರೀತಿಯಾದರೆ ಹೇಗೆ ಎಂದು ಸಭೆಯ ಗಮನಕ್ಕೆ ತಂದರು.ಮಳೆಗಾಲದ ಸಂದರ್ಭದಲ್ಲಿ ಜಾನುವಾರು ರಕ್ಷಣೆಗೂ ಗಮನಹರಿಸಬೇಕು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಹಾಗೂ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.
ಮಡಿಕೇರಿ ತಾ.ಪಂ.ಇಒ ಶೇಖರ್ ಅವರು ಮಾತನಾಡಿ ಮುಂಗಾರು ಸಂದರ್ಭದಲ್ಲಿ ಮುನ್ನೆಚ್ಚರ ವಹಿಸುವಲ್ಲಿ ಈಗಾಗಲೇ ಹಲವು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಾಯತ್ ರಾಜ್, ಕಂದಾಯ, ಪೊಲೀಸ್, ಎಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾ.ಪಂ. ಮಟ್ಟದಲ್ಲಿಯೂ ಸಹ ಆಡಳಿತ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಹಲವು ಸಲಹೆ ಮಾರ್ಗದರ್ಶನ ನೀಡಲಾಗಿದೆ ಎಂದರು. ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರ ವಹಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ವಿರಾಜಪೇಟೆ ತಹಸೀಲ್ದಾರರಾದ ಪ್ರವೀಣ್ ಕುಮಾರ್ ಅವರು ಮಾತನಾಡಿ ಮುಂಗಾರು ಸಂದರ್ಭದಲ್ಲಿ ಮುನ್ನೆಚ್ಚರ ವಹಿಸುವ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಲಾಲು ಅಪ್ಪಣ್ಣ ಅವರು ಮಾತನಾಡಿ ಬಿರುನಾಣಿ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮಳೆ ಆರಂಭವಾದ ನಂತರ ಜಂಗಲ್ ಕಟ್ಟಿಂಗ್, ಗುಂಡಿ ಮುಚ್ಚುವುದು, ಚರಂಡಿ ಸ್ವಚ್ಚಗೊಳಿಸುವುದು ಸೇರಿದಂತೆ ಯಾವುದೇ ರೀತಿಯ ಕೆಲಸ ಮಾಡಲು ಕಷ್ಟಸಾಧ್ಯ, ಆದ್ದರಿಂದ ಮಳೆ ಆರಂಭಕ್ಕೂ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು. ಕುಡಿಯುವ ನೀರು ವಿಭಾಗದ ಎಂಜಿನಿಯರ್ ಭಾಸ್ಕರ ಅವರು ಮಾತನಾಡಿ ಕುಡಿಯುವ ನೀರು ಕಾಮಗಾರಿಗೆ ಸರ್ಕಾರದಿಂದ ಒಂದುವರೆ ಕೋಟಿ ರೂ ಅನುದಾನ ಬಿಡುಗಡೆ ಆಗಿದ್ದು, ಕಾಮಗಾರಿ ಸಂಬಂಧ ಅನುಮೋದನೆ ನೀಡಬೇಕಿದೆ ಎಂದು ಕೋರಿದರು.
ಪೊನ್ನಂಪೇಟೆ ತಹಸೀಲ್ದಾರ್ ಸಂಜನಾ, ತಾ.ಪಂ.ಇಒ, ಮಹಿಳಾ ಮತ್ತು ಅಭಿವೃದ್ಧಿ, ಸೆಸ್ಕ್, ಲೋಕೋಪಯೋಗಿ, ಪಂಚಾಯತ್ ರಾಜ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮಳೆಗಾಲದ ಸಂದರ್ಭದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.