ಸಾರಾಂಶ
ಸ್ಮಾರಕಗಳು ನಮ್ಮ ಪರಂಪರೆಯ ಪ್ರತೀಕವಾಗಿದ್ದು, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರು ಪಡೆದುಕೊಂಡ ಅತ್ಯಮೂಲ್ಯ ಬಳುವಳಿಯಾಗಿವೆ. ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸ್ಮಾರಕಗಳು ನಮ್ಮ ಪರಂಪರೆಯ ಪ್ರತೀಕವಾಗಿದ್ದು, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರು ಪಡೆದುಕೊಂಡ ಅತ್ಯಮೂಲ್ಯ ಬಳುವಳಿಯಾಗಿವೆ. ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ವಿಶ್ವ ಪರಂಪರೆ ದಿನಾಚರಣೆ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕಿ.ನಾ.ವಿ.ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಕಲ್ಮಠದ ಆವರಣದಲ್ಲಿರುವ ಕಿತ್ತೂರಿ ಅರಸರ ಸಮಾಧಿಗಳ ಸ್ವಚ್ಛತಾ ಕಾರ್ಯ ಹಾಗೂ ಪರಂಪರೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಭವ್ಯ ಪರಂಪರೆಯ ಅಸಂಖ್ಯಾತ ಸ್ಮಾರಕಗಳು, ದೇವಾಲಯಗಳು, ಶಿಲ್ಪಗಳು, ಶಾಸನಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಗತ್ಯವಾಗಿದೆ. ಈ ಬಾರಿ ವನ್ನೂರಿನಲ್ಲಿರುವ ಐತಿಹಾಸಿಕ ಬಾವಿಯನ್ನು ಹಾಗೂ ಇತರೆ ಸ್ಮಾರಕಗಳನ್ನು ಸ್ವಚ್ಛತೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತವು ಶ್ರೀಮಂತಿಕೆಯ ಪರಂಪರೆಯನ್ನು ಹೊಂದಿದ್ದು, ಇತಿಹಾಸ ನಮ್ಮ ಹಿರಿಯರು ನಿರ್ಮಿಸಿಕೊಟ್ಟು ಬಿಟ್ಟು ಹೋದ ಕಲೆ ವಾಸ್ತುಶಿಲ್ಪ ಶಿಲ್ಪಕಲೆ ಸ್ಮಾರಕಗಳು, ಕಲಾಕೃತಿಗಳು ಆಚರಣೆಗಳು ರೂಢಿ ಪದ್ಧತಿಗಳು, ಆಚಾರ-ವಿಚಾರಗಳು, ಸಾಹಿತ್ಯ ಮೊದಲಾದ ಅನುವಂಶಿಕ ಆಸ್ತಿಗಳು ಮುಂತಾದ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಿತ್ತೂರು ರಾಣಿ ಚನ್ನಮ್ಮ ವಸ್ತುಸಂಗ್ರಾಲಯದ ಕ್ಯೂರೇಟರ್ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಪರಂಪರೆ ದಿನಾಚರಣೆಯ ಮಹತ್ವ ಹಾಗೂ ಪರಂಪರೆಯ ವಿಧಗಳ ಕುರಿತು ವಿವರಿಸಿದರು.ಖಾನಾಪೂರ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ್ ತಾಬೂಜಿ ವಿಶೇಷ ಉಪನ್ಯಾಸದಲ್ಲಿ ವಿಪತ್ತುಗಳು ಮತ್ತು ಸಂಘರ್ಷಗಳಿಂದ ಬೆದರಿಕೆಯಲ್ಲಿರುವ ಪರಂಪರೆಯ ಕುರಿತು ಮಾಹಿತಿ ನೀಡಿ, ಬಾದಾಮಿ ಮತ್ತು ಐಹೊಳೆ ಭಾಗದಲ್ಲಿ ಸ್ಮಾರಕಗಳು ಹೇಗೆ ಪ್ರಕೃತಿಯಿಂದ ಆಗುತ್ತಿರುವ ವಿಪತ್ತುಗಳಿಗೆ ಒಡ್ಡಿಕೊಂಡಿವೆ ಎಂದು ತಿಳಿಸಿದರು.ವಿಶ್ವ ಪರಂಪರೆ ದಿನಾಚರಣೆ 2025 ಅಂಗವಾಗಿ ಕಲ್ಮಠದ ಆವರಣದಲ್ಲಿರುವ ಕಿತ್ತೂರು ಅರಸರ ಸಮಾಧಿಗಳು ಸ್ವಚ್ಛತಾ ಕಾರ್ಯಕ್ಕೆ ಶಾಸಕ ಬಾಬಾಸಾಹೇಬ್ ಪಾಟೀಲ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಸಿಇಒ ಕಿರಣ್ ಗೋರ್ಪಡೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಪಟ್ಟಣ ಪಂಚಾಯತಿ ಸದಸ್ಯರಾದ ಎಂ.ಎಫ್.ಜಕಾತಿ, ಕೃಷ್ಣ ಬಾಳೇಕುಂದ್ರಿ, ಮುಖಂಡರಾದ ಸುನಿಲ್ ಗಿವಾರಿ, ಕಾಲೇಜು ಪ್ರಾಂಶುಪಾಲ ಎಚ್.ಕೆ.ನಾಗರಾಜ, ಜಿ.ಜಿ.ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಮಹೇಶ ಚೆನ್ನಂಗಿ, ಹಿರೇನಂದಿಹಳ್ಳಿ ಮುಖ್ಯೋಪಾಧ್ಯಯ ಬಸವರಾಜ ಬಿದರಿ, ಶಿಕ್ಷಕರಾದ ಮಹೇಶ್ವರ ಹೊಂಗಲ, ಬಿ.ಎಂ.ಗಡೆಣ್ಣವರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಹಿರೇನಂದಿಹಳ್ಳಿ ಭಜನಾ ಮಂಡಳಿಯಿಂದ ಭಜನಾ ಗೀತೆಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಉಪನ್ಯಾಸಕ ಸಿ.ಎಂ.ಗರಗದ ನಿರೂಪಿಸಿದರು. ನವ್ಯ ಹೊಂಗಲ ಪ್ರಾರ್ಥಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಿ.ನಾ.ವಿ.ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪಟ್ಟಣ ಪಂಚಾಯತಿ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.1982 ರಿಂದ ಏ.18 ರಂದು ವಿಶ್ವ ಪರಂಪರೆ ದಿನಾಚರಣೆ ಆಚರಿಸಲಾಗುತ್ತದೆ. 2024ರ ಅಕ್ಟೋಬರ್ ಹೊತ್ತಿಗೆ 196 ದೇಶಗಳಲ್ಲಿ 1223 ವಿಶ್ವ ಪರಂಪರೆಯ ತಾಣಗಳಲ್ಲಿ 952 ಸಾಂಸ್ಕೃತಿಕ, 231 ನೈಸರ್ಗಿಕ, 40 ಮಿಶ್ರ ತಾಣಗಳಿವೆ. ಅದರಲ್ಲಿ ಭಾರತವು 43 ವಿಶ್ವಪರಂಪರೆ ತಾಣಗಳನ್ನು ಹೊಂದಿದೆ ಮತ್ತು ಯುನಿಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ 62 ಇತರ ತಾಣಗಳನ್ನು ಹೊಂದಿವೆ.-ರಾಘವೇಂದ್ರ,
ಕ್ಯೂರೇಟರ್ ಕಿತ್ತೂರು ರಾಣಿ ಚನ್ನಮ್ಮ ವಸ್ತುಸಂಗ್ರಾಲಯ.