ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಂಸ್ಥೆಯನ್ನು ಹುಟ್ಟು ಹಾಕುವುದು ಮಾತ್ರ ಅಲ್ಲ. ಅದರ ಉದ್ದೇಶವನ್ನು ಜನರಿಗೆ ಮುಟ್ಟಿಸಿ ಅವರಿಂದ ಪ್ರೀತಿ ವಿಶ್ವಾಸ ಗಳಿಸಿ ಜನಸೇವೆಯ ಮೂಲಕ ಮೆಚ್ಚುಗೆ ಪಡೆಯುವುದೇ ಸಾರ್ಥಕತೆ ಎಂದು ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.ಮೂಡುಬಿದಿರೆ ನೇತಾಜಿ ಬ್ರಿಗೇಡ್‌ನ 5ನೇ ವಾರ್ಷಿಕೋತ್ಸವದ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವ ಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ಏರ್ಪಡಿಸಿದ್ದ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ, ಅಂಗಾಂಗ ದಾನ ಮಾಹಿತಿ ಮತ್ತು ನೋಂದಣಿ, ಸಹಾಯಧನ ವಿತರಣೆ, ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.40 ವರ್ಷ ದಾಟಿದ ನಂತರ ಬರುತ್ತಿದ್ದ ಕಾಯಿಲೆಗಳು ಇಂದು ಸಣ್ಣ ವಯಸ್ಸಿನಲ್ಲಿಯೇ ನಮ್ಮನ್ನು ಆಕ್ರಮಿಸುತ್ತಿವೆ. ಇಂತಹ ವೈಪರೀತ್ಯ ತಡೆಯಲು ಆರೋಗ್ಯ ತಪಾಸಣೆಗಳು ಅಗತ್ಯ. ನೇತ್ರದಾನ, ಅಂಗಾಂಗದಾನದಂತಹ ಉತ್ತಮ ಕೆಲಸಗಳ ಬಗ್ಗೆ ಜಾಗೃತಿ ಹಾಗೂ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿರುವುದು ಉತ್ತಮ ಕೆಲಸ ಎಂದರು.ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನೇತಾಜಿ ಬ್ರಿಗೇಡ್ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾ ಸದಸ್ಯ ರಾಜೇಶ್ ನಾಯ್ಕ್ , ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ವಿಹಿಂಪದ ತಾಲೂಕು ಪ್ರಮುಖ್ ಸುಚೇತನ್ ಜೈನ್, ಜೀವನ ಸಾರ್ಥಕತೆಯ ಪದ್ಮಾವತಿ, ವೈದ್ಯಾಧಿಕಾರಿ ಅತಿಥಿಗಳಾಗಿದ್ದರು. ನೇತಾಜಿ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ರಾಹುಲ್ ಕುಲಾಲ್ ಸ್ವಾಗತಿಸಿದರು. ರಮ್ಯ ನಿರೂಪಿಸಿದರು. ಅಭಿಷೇಕ್ ವಂದಿಸಿದರು.