ಸಾರಾಂಶ
ಮೂಡುಬಿದಿರೆ ನೇತಾಜಿ ಬ್ರಿಗೇಡ್ ವತಿಯಿಂದ 5ನೇ ವರ್ಷದ ದೀಪಾವಳಿ ಉತ್ಸವವನ್ನು ಸ್ವರಾಜ್ಯ ಮೈದಾನದಲ್ಲಿರುವ ಚಿಣ್ಣರ ಕಿರು ಉದ್ಯಾನವನದಲ್ಲಿ ಆಚರಿಸಲಾಯಿತು. ಸತ್ಯಶ್ರೀ ಭಜನಾ ಮಂಡಳಿ ಪುತ್ತಿಗೆ ಇವರಿಂದ ಕುಣಿತ ಭಜನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ನೇತಾಜಿ ಬ್ರಿಗೇಡ್ ವತಿಯಿಂದ 5ನೇ ವರ್ಷದ ದೀಪಾವಳಿ ಉತ್ಸವವನ್ನು ಸ್ವರಾಜ್ಯ ಮೈದಾನದಲ್ಲಿರುವ ಚಿಣ್ಣರ ಕಿರು ಉದ್ಯಾನವನದಲ್ಲಿ ಆಚರಿಸಲಾಯಿತು.ಸ್ಥಳೀಯರಾದ ಮೀರಾ ಪಿ. ಸಾಲ್ಯಾನ್, ವಾರಿಜಾ ಆನಂದ ನಾಯ್ಕ್ ಮತ್ತು ಸುಮಿತ್ರಾ ಆಚಾರ್ಯ ದೀಪ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಬಾಬುರಾಜೇಂದ್ರ ಪ್ರೌಢಶಾಲೆಯ ಶಿಕ್ಷಕ ವೆಂಕಟರಮಣ ಕೆರೆಗದ್ದೆ ಅವರು ದೀಪಾವಳಿಯ ಸಂದೇಶ ನೀಡಿ, ಐದು ದಿನಗಳ ಕಾಲ ನಡೆಯುವ ಹಬ್ಬಗಳ ಗುಚ್ಛ ದೀಪಾವಳಿ. ನಮ್ಮ ಬದುಕನ್ನು ಬೆಳಗಿಸುವ, ಉತ್ತಮ ಆರೋಗ್ಯವನ್ನು , ಧನ ಸಂಪತ್ತನ್ನು ನೀಡುವ ಮತ್ತು ನಮ್ಮಲ್ಲಿರುವ ಶತ್ರು ಬುದ್ಧಿಯನ್ನು ವಿನಾಶ ಮಾಡುವುದೇ ದೀಪದ ಗುಣ. ಸುಖ ಬಂದಾಗ ಅಹಂಕಾರ ಪಡದೆ, ದುಃಖ ಬಂದಾಗ ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆನ್ನುವುದೇ ದೀಪಾವಳಿ ಮುಖ್ಯ ಸಂದೇಶ ಎಂದರು.ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ, ನೇತಾಜಿ ಬ್ರಿಗೇಡ್ ಅಧ್ಯಕ್ಷ ದಿನೇಶ್ ಶೆಟ್ಟಿ, ಸ್ಥಾಪಕ ರಾಹುಲ್ ಕುಲಾಲ್, ಸತ್ಯಶ್ರೀ ಭಜನಾ ಮಂಡಳಿ ಸಂಚಾಲಕ ಕೃಷ್ಣಪ್ಪ ಪೂಜಾರಿ ಇದ್ದರು.
ಆಮಂತ್ರಣ ಪತ್ರಿಕೆಯನ್ನು ತಲುಪಿಸುವ ಸಂಜೀವ ಅವರನ್ನು ಗೌರವಿಸಲಾಯಿತು.ನಂತರ ಸತ್ಯಶ್ರೀ ಭಜನಾ ಮಂಡಳಿ ಪುತ್ತಿಗೆ ಇವರಿಂದ ಕುಣಿತ ಭಜನೆ ನಡೆಯಿತು.
ಕಾರ್ಯಕ್ರಮಕ್ಕೆ ಮಾರಿಗುಡಿ ಫ್ರೆಂಡ್ಸ್, ಆದಿಶಕ್ತಿ ಫ್ರೆಂಡ್ಸ್ ಬೆದ್ರ, ಗಾಂಧಿನಗರ ಫ್ರೆಂಡ್ಸ್ ಬೆದ್ರ ಇವರು ಸಹಕಾರ ನೀಡಿದರು.ಶ್ರೀನಿತ್ ಶೆಟ್ಟಿ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.