ಸಾರಾಂಶ
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ತಾಲೂಕು ಎನ್ನುವ ಹಿರಿಮೆಯ ಮೂಡುಬಿದಿರೆಗೆ ಬರುವವರಿಗೆ ಇಲ್ಲಿನ ಬಸ್ ನಿಲ್ದಾಣ ವಿಶೇಷ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಬೇರೆಲ್ಲೂ ಇಂತಹದ್ದೊಂದು ಬಸ್ ನಿಲ್ದಾಣ ಕಾಣಲು ಸಾಧ್ಯವೇ ಇಲ್ಲ. ಇದು ಬಸ್ ನಿಲ್ದಾಣವೋ, ಖಾಸಗಿ ವಾಹನಗಳ ಪಾರ್ಕಿಂಗ್ ಜಾಗವೋ ಎಂದು ಪ್ರಯಾಣಿಕರು ಗೊಂದಲಕ್ಕೊಳಗಾದರೆ ಅಚ್ಚರಿ ಏನಿಲ್ಲ.
ಹೇಳುವುದಕ್ಕೆ ಇದು ಖಾಸಗಿ ಬಸ್ ನಿಲ್ದಾಣ. ಆದರೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇಲ್ಲಿ ಬಂದು, ನಿಂತು ಹೋಗದ ವಾಹನಗಳೇ ಇಲ್ಲ ಎನ್ನಬಹುದು. ಹಾಗಾಗಿ ಇದು ಎಲ್ಲ ವಾಹನಗಳಿಗೂ ತಂಗುದಾಣ. ಮುಖ್ಯವಾಗಿ ಈ ನಿಲ್ದಾಣದಲ್ಲಿ ರಿಕ್ಷಾ, ಕಾರು, ಟೆಂಪೋ, ಸಹಿತ ದ್ವಿಚಕ್ರವಾಹನಗಳದ್ದೇ ಕಾರುಬಾರು. ಇನ್ನು ಖಾಸಗಿ ಬಸ್‌ಗಳಿಗಂತೂ ಟೈಮಿಂಗ್ ಪಾಲನೆಯಿಂದಾಗಿ ನಿಲ್ಲುವಷ್ಟು ಪುರುಸೊತ್ತೂ ಇಲ್ಲ. ಹಾಗಾಗಿ ಇಲ್ಲಿ ಬಸ್‌ಗಳಿಗಿಂತ ಇತರ ವಾಹನಗಳ ನಿಲುಗಡೆಯೇ ಜಾಸ್ತಿ.ಪುರಸಭೆಯವರು ಹಾಕಿದ ಬೋರ್ಡುಗಳಿಗೆ ಕ್ಯಾರೆ ಎನ್ನದ ಸ್ಥಿತಿ ನಿರ್ಮಾಣವಾಗಿದೆ. ಪೋಲೀಸರಂತು ಇತ್ತ ಮುಖವೂ ಮಾಡುವುದಿಲ್ಲ. ಖಾಸಗಿ ನಿಲ್ದಾಣದ ಈ ಅವ್ಯವಸ್ಥೆಗೆ ಸ್ಥಳೀಯ ಆಡಳಿತ ವ್ಯವಸ್ಥೆಯದ್ದು ಜಾನಕುರುಡು.
ಪ್ರಯಾಣಿಕರಿಗೆ ಪಾಡು ಕೇಳೋರಿಲ್ಲ: ಖಾಸಗಿ ಬಸ್ ನಿಲ್ದಾಣದ ತುಂಬಲ್ಲ ಇತರ ವಾಹನಗಳೇ ಪಾರ್ಕಿಂಗ್ ಮಾಡುವುದರಿಂದ ಪ್ರಯಾಣಿಕರಿಗೆ ಬಸ್ ಹತ್ತಲು, ಇಳಿಯಲು ಪರದಾಡುವಂತಾಗಿದೆ. ಬಸ್‌ಗಳನ್ನು ಜಾಗ ಇರುವಲ್ಲಿ ನೋಡಿ ನಿಲ್ಲಿಸುವುದರಿಂದ ಇನ್ನೆಲ್ಲೋ ನಿಂತಿರುವ ಪ್ರಯಾಣಿಕರು ಅವಸರದಿಂದಲೇ ಬಂದು ಬಸ್ ಹತ್ತಬೇಕು. ಅದರಲ್ಲೂ ಲಗೇಜುಗಳಿದ್ದರೆ ಅವುಗಳನ್ನೆಲ್ಲ ಹೊತ್ತುಕೊಂಡು ಬಸ್ ಇರುವುಲ್ಲಿಗೆ ಬರುವ ಬರಬೇಕು. ಇನ್ನು ಹಿರಿಯ ನಾಗರಿಕರು, ವಯಸ್ಸಾದವರ ಸಮಸ್ಯೆ ಕೇಳುವವರಿಲ್ಲ.ಕೆಲವೊಮ್ಮೆ ಬಸ್‌ಗಳೇ ಬರುವುದಿಲ್ಲ: ಕೆಲವೊಮ್ಮೆ ಬಸ್ ಚಾಲಕರು ತಡವಾಯಿತು ಎಂದು ನಿಲ್ದಾಣದ ಪಕ್ಕದ ವನ್ ವೇಗೆ ತಿರುಗಿ ಆಸ್ಪತ್ರೆ ರಸ್ತೆ ಬಳಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ನಿಂತ ಪ್ರಯಾಣಿಕರು ನಿತ್ಯವೂ ಬಸ್‌ಗಾಗಿ ಅತ್ತಿಂದಿತ್ತ ಓಡಾಡುವುದರಲ್ಲೇ ಹೈರಾಣಾಗುವ ದುಸ್ಥಿತಿ. ಪಾರ್ಸೆಲ್ ಕೊಡುವ , ಪಡೆಯಲು ಕಾದು ನಿಂತವರಿಗೆ ಬಸ್‌ಗಳು ಯಾವ ದಾರಿಯಲ್ಲಿ ಮಾಯವಾಗುತ್ತವೋ ಎಂಬ ಆತಂಕ ನಿತ್ಯದ ಗೋಳಾಗಿದೆ. ಹೀಗೆ ಬಸ್ಸು ನಿಲ್ದಾಣವೊಂದು ಗೊಂದಲಗಳ ಗೂಡಾಗಿ ಸಮಸ್ಯೆಗಳ ಜತೆಗೆ ಸವಾಲುಗಳನ್ನೂ ಆತಂಕಗಳನ್ನೂ ಹೊದ್ದು ಹೈರಾಣಾಗಿದೆ.
ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಅವ್ಯವಸ್ಥೆಯನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡದಿದ್ರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಎಲ್ಲರೂ ತಮ್ಮ ಕೆಲಸವಾದರೆ ಸಾಕು ಎಂಬ ಭಾವನೆಯಲ್ಲಿದ್ಧಾರೆ. ಸಮಸ್ಯೆಯ ಪರಿಹಾರದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ನಮ್ಮಂತಹ ವಯಸ್ಸಾದವರು ಇಲ್ಲಿ ಓಡಾಡುವುದಕ್ಕೇ ಭಯವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರೇ ಕಾನೂನು ಪಾಲಿಸದರವರಿಗೆ ಮುಲಾಜಿಲ್ಲದೆ ಪಾಠ ಕಲಿಸಿದಾಗ ಬಸ್ ಸ್ಟ್ಯಾಂಡ್ ಬಿಡಿ, ಇಡೀ ಪೇಟೆ ಸುವ್ಯವಸ್ಥಿತವಾಗಿರಲಿಲ್ಲವೇ?- ಅಪ್ಪಿ ಪೂಜಾರ್ತಿ, ಹಿರಿಯ ನಾಗರಿಕರು/ ಪ್ರಯಾಣಿಕರು(ಚಿತ್ರ ಸ್ಪಷ್ಟವಾಗಿ/ ದೊಡ್ಡದಾಗಿ ಬಂದರೆ ಪರಿಸ್ಥಿತಿ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ.)