ಮೂಡುಬಿದಿರೆ: ಸಂಘಟನೆಗಳು ಸಂಸ್ಥೆಗಳಾಗಿ ಮುಂದೆ ಸಾಗಿದಾಗ ಸಂಘಟನೆಯ ಶಕ್ತಿಗೆ ಬೆಲೆ ಬರುತ್ತದೆ. ಈ ಸಹಕಾರ ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರವಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ.ತಾರಾನಾಥ ಪೂಜಾರಿ ಹೇಳಿದ್ದಾರೆ.ಮಂಗಳೂರಿನ ಪಡೀಲ್ ನಲ್ಲಿ ಸ್ವಂತ ಆಡಳಿತ ಕಟ್ಟಡ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 35ನೇ ಶಾಖೆಯನ್ನು ಮೂಡುಬಿದಿರೆ ಅಂಚೆ ಕಚೇರಿ ಎದುರಿನ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ನಡವಳಿಕೆ ಹಾಗೂ ಉತ್ತಮ ಉದ್ದೇಶವಿದ್ದರೆ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆ ಅಗತ್ಯವಾಗಿದ್ದು, ವ್ಯಾಜ್ಯಗಳಿಂದ ಆದಷ್ಟು ದೂರವಿರಬೇಕು ಎಂದರು.ಶಾಸಕ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು.ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ, ಮಹಿಳಾ ಸಬಲೀಕರಣದ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ನಿರಂತರ ಸಾಲ ನೀಡಲಾಗುತ್ತಿದೆ. ಹೆಣ್ಣುಮಕ್ಕಳ ಮದುವೆ ಹಾಗೂ ಶಿಕ್ಷಣ, ಸಾಮಾಜಿಕ ಸೇವೆಗಳಿಗೂ ಈ ಸಂಸ್ಥೆ ಆದ್ಯತೆ ನೀಡುತ್ತಿದೆ. ಶೇ.95ರಷ್ಟು ಮಂದಿ ಮಹಿಳಾ ಸಿಬಂದಿ ಇಲ್ಲಿದ್ದು, ದಕ್ಷ ಆಡಳಿತ ಮಂಡಳಿಯೂ ಇದೆ ಎಂದರು.
ಐ.ತಾರಾನಾಥ ಪೂಜಾರಿ ಹಾಗು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಅಂಕ ಗಳಿಸಿದ ದಿಶಾ ಅವರನ್ನು ಸನ್ಮಾನಿಸಲಾಯಿತು.ಬೆಳುವಾಯಿ ವ್ಯವಸಾಯಿಕ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ಪ್ರಮುಖರಾದ ಸೀತಾರಾಮ ಆಚಾರ್ಯ, ಆತ್ಮಶಕ್ತಿ ಸಹಕಾರಿ ಸಂಘದ ನಿರ್ದೇಶಕರಾದ ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ ಎನ್., ರಾಮನಾಥ ಸನಿಲ್, ಮುದ್ದುಮೂಡುಬೆಳ್ಳೆ, ದಿವಾಕರ ಬಿ.ಪಿ.ಮತ್ತಿತರರು ಇದ್ದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ ಪೂಜಾರಿ ವಂದಿಸಿದರು. ವಿಶ್ವನಾಥ ರೆಂಜಾಳ ನಿರೂಪಿಸಿದರು.
ಉದ್ಘಾಟನೆ ಪ್ರಯುಕ್ತ 500 ದಿನಗಳ ಠೇವಣೆಗಳಿಗೆ ಶೇ.10 ವಿಶೇಷ ಬಡ್ಡಿ, 1000 ದಿನಗಳ ಠೇವಣಿಗಳಿಗೆ ಶೇ.10.50 ಬಡ್ಡಿದರ ನೀಡಲಾಗುವುದು. ಚಿನ್ನಾಭರಣ ಸಾಲಗಳಿಗೆ ಪ್ರತೀ ಗ್ರಾಂಗೆ ಗರಿಷ್ಠ ಮೌಲ್ಯ, 12000 ರೂ.ವರೆಗೆ ಸದಸ್ಯರಿಗೆ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು. ಸಂಘದ ಎಲ್ಲ ಶಾಖೆಗಳಲ್ಲಿ ಕಚೇರಿ ವೇಳೆಯಲ್ಲಿ ಇ ಮುದ್ರಾಂಕ, ನೆಫ್ಟ್, ಆರ್ ಟಿ ಜಿಎಸ್ ಇಲ್ಲದೆ ಎಲ್ ಐ ಸಿ, ಕೇರ್, ಇಪ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಭ್ಯವಿರಲಿವೆ.