ಸಾರಾಂಶ
ಜವನೆರ್ ಬೆದ್ರ ಫೌಂಡೇಶನ್ ಆಶ್ರಯದಲ್ಲಿ ಬೆದ್ರದ ಕೃಷ್ಣೋತ್ಸವ 2025 ಕಾರ್ಯಕ್ರಮ ಕೆ.ಅಮರನಾಥ ಶೆಟ್ಟಿ ವೃತ್ತದ ಬಳಿ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ 16 ರಂದು ನಡೆಯಲಿದೆ.
ಗೋಪಾಲಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂಭ್ರಮ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಳದ ೧೦೯ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ಆಶ್ರಯದಲ್ಲಿ ಬೆದ್ರದ ಕೃಷ್ಣೋತ್ಸವ 2025 ಕಾರ್ಯಕ್ರಮ ಕೆ.ಅಮರನಾಥ ಶೆಟ್ಟಿ ವೃತ್ತದ ಬಳಿ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ 16 ರಂದು ನಡೆಯಲಿರುವುದು ಎಂದು ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಮರ್ ಕೋಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಂದು ಮಧ್ಯಾಹ್ನ 3.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ನಟ ಶೈನ್ ಶೆಟ್ಟಿ, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಉದ್ಯಮಿಗಳಾದ ಮೇಘನಾಥ ಶೆಟ್ಟಿ, ಪೂರ್ಣಚಂದ್ರ ಜೈನ್, ದ.ಕ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಲ್‌ಬೈಲ್ ಉಪಸ್ಥಿತರಿರುವರು. ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನಿಂದ ಮೂಡುಬಿದಿರೆಯಲ್ಲಿ ಮೊದಲ ಬಾರಿಗೆ ರಂಗ ಸಂಗೀತ ಹಾಗೂ ಜನಪದ ಗೀತೆ ಕಾರ್ಯಕ್ರಮವಿದೆ ಎಂದರು.ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 5.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷತೆವಹಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಚೌಟರ ಅರಮನೆಯ ಕುಲದೀಪ ಎಂ. ಸಹಿತ ಪ್ರಮುಖರು ಭಾಗವಹಿಸಲಿರುವರು ಎಂದರು. ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವರಿಗೆ ೨೦೨೫ನೇ ಸಾಲಿನ ಕೃಷ್ಣೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ, ಸಂಗೀತ ನಿರ್ದೇಶಕ ಯಶವಂತ ಎಂ.ಜಿ, ನಟ ದೀಕ್ಷಿತ್ ಕೆ.ಅಂಡಿಂಜೆ, ನಟ ಯುವ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಅಮರ್ ಕೋಟೆ ತಿಳಿಸಿದರು.ಟ್ರಸ್ಟ್ ಕಾರ್ಯದರ್ಶಿ ದಿನೇಶ್ ನಾಯ್ಕ್, ಟ್ರಸ್ಟಿ ರಂಜಿತ್ ಶೆಟ್ಟಿ, ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಗುರುಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.