ಮೂಡುಬಿದಿರೆ: ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ

| Published : Apr 23 2025, 12:35 AM IST

ಮೂಡುಬಿದಿರೆ: ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈಜುಕೊಳ ಆವರಣದಲ್ಲಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡದೆ ಇರುವುದು ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಯುವ ಸಂಪನ್ಮೂಲ ಇರುವ ದೇಶದ ಜೊತೆಗೂ ನಮಗೂ ಹೊರಡಲು ಕಷ್ಟವಾಗುತ್ತಿದೆ ಎಂದು ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ ಗೌರವಾಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈಜುಕೊಳ ಆವರಣದಲ್ಲಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ನಮ್ಮ ಜಿಲ್ಲೆಯಲ್ಲಿ ಈಜುಗಾರರಿಗೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುವಂತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ದಕ್ಷಿಣ ಕನ್ನಡ ಈಜುಗಾರರ ಸಂಘದ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿ, ಡಾ. ಮೋಹನ ಆಳ್ವರ ಗುರಿ ವಿದ್ಯಾರ್ಥಿಗಳ ಯಶಸ್ಸು. ಅದು ಆಳ್ವರಿಗೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಪೂರ್ತಿ ನೀಡುತ್ತಿದೆ ಎಂದರು.

ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಈಜು ಪಠ್ಯದ ಒಂದು ಭಾಗವಾಗಿರುತ್ತದೆ. ಅದು ಸಾಧನೆಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಈಜು ಕಲಿಯಬೇಕು. ಆಗ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಈಜುಪಟುಗಳ ಸಂಖ್ಯೆ ಅಭಿವೃದ್ಧಿಯಾಗುತ್ತದೆ ಎಂದರು.

ಭಾರತದ ಮಾಜಿ ಸ್ವಿಮ್ಮಿಂಗ್ ಕೋಚ್ ಪಾರ್ಥ ವಾರಣಾಸಿ ಮಾತನಾಡಿ, ಭಾರತದಲ್ಲಿ 2030ರ ಹೊತ್ತಿಗೆ ಕ್ರೀಡೆ ಮುಖ್ಯವಾದ ವೃತ್ತಿಯಾಗಲಿದೆ. ಜನರು ಕ್ರೀಡೆಯಲ್ಲಿ ಹೆಚ್ಚಿನ ಗೌರವ ಪಡೆಯಲಿದ್ದಾರೆ. ಈಜು ಕ್ರೀಡೆಯಲ್ಲಿ ಪ್ರಮುಖ ಬದಲಾವಣೆಗಳಾಗಲಿದೆ ಎಂದರು.

ಬಿಹಾರದ ಗಯಾದಲ್ಲಿ ಮೇ 5 ರಿಂದ 9 ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಚಿಂತನ್ ಶೆಟ್ಟಿ, ಪ್ರತೀಕ್ಷಾ ಶೆಣೈ ಹಾಗೂ ಅಲೈಸ್ಟರ್ ಸ್ಯಾಮುಲ್ ರೆಗೋ ರವರಿಗೆ ದಕ್ಷಿಣ ಕನ್ನಡ ಈಜುಗಾರರ ಸಂಘದಿಂದ ತಲಾ 15000 ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 5,000ಯನ್ನು ನೀಡಿ ಅಭಿನಂದಿಸಲಾಯಿತು.

ದಕ್ಷಿಣ ಕನ್ನಡ ಈಜುಗಾರರ ಸಂಘದ ಕಾರ್ಯದರ್ಶಿ ಮಹೇಶ್ ಕೋಡಿಕಲ್, ಮಂಗಳ ಈಜುಗಾರರ ಕ್ಲಬ್‌ನ ಅಧ್ಯಕ್ಷ ಶಿವಾನಂದ ಗಟ್ಟಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಈಜುಗಾರರ ಸಂಘದ ಸಹ ಕಾರ್ಯದರ್ಶಿ ಶರ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.