ಸಾರಾಂಶ
ಮೂಡುಬಿದಿರೆ ತಾಲೂಕಿನಾದ್ಯಂತ ವಿವಿಧೆಡೆ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತಾಲೂಕಿನಾದ್ಯಂತ ವಿವಿಧೆಡೆ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.ಶಿರ್ತಾಡಿ-ಹೊಸ್ಮಾರು ರಾಜ್ಯ ಹೆದ್ದಾರಿಯ ಮಾಂಟ್ರಾಡಿಯಲ್ಲಿ ಹೆದ್ದಾರಿಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ. ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯಲ್ಲಿ ಶೇಖರ ಪೂಜಾರಿ ಎಂಬವರ ಅಂಗಡಿಯ ಮೇಲೆ ಮರ ಉರುಳಿ ಬಿದ್ದಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ಇದೇ ಪರಿಸರದ ಪಿಜಿನ ಪೂಜಾರಿ, ಹರೀಶ್ ಜೈನ್ ಅವರ ಮನೆಗಳಿಗೆ ಮರ ಬಿದ್ದು ಹಾಗಿಯಾಗಿದೆ. ಗೇರು ಬೀಜ ಉದ್ಯಮದ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಅಳಿಯೂರು ಬಸದಿಯ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿವೆ.ವಾಲ್ಪಾಡಿ ಗ್ರಾಮದಲ್ಲಿ ಪತ್ರಕರ್ತ ಅಶ್ರಫ್ ಅವರ ಮನೆಯ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಪಡುಮಾರ್ನಾಡು ಗ್ರಾಮದ ಮೂಡುಮಾನಾ೯ಡು ತಂಡ್ರಕೆರೆಯಲ್ಲಿ ಜಯಂತಿ ಹಾಗೂ ವಿಶ್ವನಾಥ್ ಎಂಬವರ ಮನೆಯ ಸಿಮೆಂಟ್ ಶೀಟ್ ಹಾರಿ ಹಾನಿಯಾಗಿದೆ.ಬೆಳ್ತಂಗಡಿ ತಾಲೂಕಿನಾದ್ಯಂತ ವಿದ್ಯುತ್,ಅಂತರ್ಜಾಲ ವ್ಯತ್ಯಯಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಕೆಲವೆಡೆ ತುಂತುರು ಮಳೆಯಾಗಿದ್ದರೂ ವಿದ್ಯುತ್ ಹಾಗೂ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.ತಾಲೂಕಿಗೆ ವಿದ್ಯುತ್ ಪೂರೈಸುವ ಕೇಮಾರ್- ಗುರುವಾಯನಕೆರೆ 110 ಕೆವಿ ಡಬಲ್ ಸರ್ಕ್ಯೂಟ್ ಲೈನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ 3ಗಂಟೆ ಸುಮಾರಿಗೆ ಗುಡುಗು ಆರಂಭವಾಗುತ್ತಿದ್ದಂತೆ ಕೈಕೊಟ್ಟ ವಿದ್ಯುತ್ ರಾತ್ರಿ 9:30ರ ತನಕವು ಪ್ರತ್ಯಕ್ಷವಾಗಿಲ್ಲ. ವಿದ್ಯುತ್ ಲೈನ್ ಹಾದು ಬರುವ ಪರಿಸರಗಳಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿರುವುದು ವಿದ್ಯುತ್ ಲೈನ್ ನಲ್ಲಿ ಸಮಸ್ಯೆ ಉಂಟಾಗಲು ಕಾರಣ ಎಂದು ತಿಳಿದುಬಂದಿದೆ.ಹಗಲಿನ ಹೊತ್ತು ಬೆಳ್ತಂಗಡಿ-ಉಜಿರೆ, ನೆಲ್ಯಾಡಿ-ಧರ್ಮಸ್ಥಳ, ಉಜಿರೆ-ಚಾರ್ಮಾಡಿ, ಉಜಿರೆ-ಧರ್ಮಸ್ಥಳ ಮೊದಲಾದ ಕಡೆಯ ದೂರವಾಣಿ ಲೈನುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸಂಜೆ 6ಗಂಟೆ ತನಕ ಹಲವು ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ ಅಂತರ್ಜಾಲ ಸಂಪರ್ಕ ಕೈಕೊಟ್ಟಿತ್ತು. ವಿದ್ಯುತ್ ಹಾಗೂ ಅಂತರ್ಜಾಲ ಸಮಸ್ಯೆಯಿಂದ ಗ್ರಾಹಕರು ಪರದಾಟ ನಡೆಸುವಂತಾಯಿತು. ತಾಲೂಕಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಬೇಸಿಗೆ ಮಳೆ ಆರಂಭವಾಗಿದ್ದು ಅದರ ಬಳಿಕ ವಿದ್ಯುತ್ ಹಾಗೂ ಅಂತರ್ಜಾಲ ಸಂಪರ್ಕದಲ್ಲಿ ಪ್ರತಿನಿತ್ಯ ಸಮಸ್ಯೆಗಳು ಉಂಟಾಗುತ್ತಿದ್ದು ಗ್ರಾಹಕರು ಪರದಾಡುವಂತಾಗಿದೆ.