ಸಾರಾಂಶ
ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದಲ್ಲಿ ಫೆ 12ರಿಂದ 16ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಜಕರು, ಆಸುಪಾಸಿನ ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಸಂಘ ಸಂಸ್ಥೆಗಳ ವತಿಯಿಂದ ಭರ್ಜರಿ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಭಾನುವಾರ ಪೇಟೆಯ ಮುಖ್ಯ ರಸ್ತೆಯಲ್ಲಿ ಕೊಂಡೊಯ್ದು ದೇವಳಕ್ಕೆ ತಲುಪಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ನವೀಕೃತ ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದಲ್ಲಿ ಫೆ 12ರಿಂದ 16ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಜಕರು, ಆಸುಪಾಸಿನ ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಸಂಘ ಸಂಸ್ಥೆಗಳ ವತಿಯಿಂದ ಭರ್ಜರಿ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಭಾನುವಾರ ಪೇಟೆಯ ಮುಖ್ಯ ರಸ್ತೆಯಲ್ಲಿ ಕೊಂಡೊಯ್ದು ದೇವಳಕ್ಕೆ ತಲುಪಿಸಲಾಯಿತು.ಸ್ವರಾಜ್ಯ ಮೈದಾನದಲ್ಲಿ ಹೊರೆಕಾಣಿಕೆಯ ಜತೆಗೆ ಮಹಾಗಣಪತಿ ಹಾಗೂ ನಾಡುವಿನ ಶಿಲಾಮಯ ಮೂರ್ತಿ, ರಜತ ಕವಚಗಳನ್ನು ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಪ್ರದರ್ಶಿಸಲಾಗಿತ್ತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಎಂ. ವಿವೇಕ್ ಆಳ್ವ ಅವರು ಹೊರೆಕಾಣಿಕೆ ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.ದೇವಳದ ವ್ಯವಸ್ಥಾಪನಾ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಕೆ.ರಾವ್ ಸಹಿತ ಪದಾಧಿಕಾರಿಗಳು, ಗಣ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಕಲಶ ಧಾರಿ ಸುಮಂಗಲಿಯರು, ವಾದ್ಯ ಮೇಳ ,ಕೀಲು ಕುದುರೆ, ಬೊಂಬೆಗಳ ಸಹಿತ ವರ್ಣರಂಜಿತ ಮೆರವಣಿಗೆ ಪೇಟೆಯ ಮುಖ್ಯ ಬೀದಿಯಲ್ಲಿ ಸಾಗಿ ಜಿ.ವಿ.ಪೈ ನಗರ, ಜ್ಯೋತಿ ನಗರ, ಲಾಡಿ ದೇವಳ ಪರಿಸರಕ್ಕೆ ತಲುಪಿತು.ಸಮಾಜ ಮಂದಿರ ಸಹಿತ ಹಲವೆಡೆ ತಂಪು ಪಾನೀಯ ವ್ಯವಸ್ಥೆಗಳನ್ನು ಮಾ ಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು, ಮಹಿಳಾ ಕಾರ್ಯ ಕರ್ತೆಯರು ದೇವಳ ಪರಿಸರದಲ್ಲಿ ಹೊರೆಕಾಣಿಕೆಯನ್ನು ಉಗ್ರಾಣದಲ್ಲಿ ಜೋಡಿಸುವಲ್ಲಿ ಶ್ರಮಿಸಿದರು.
ಸ್ವಯಂ ಪ್ರೇರಣೆಯಿಂದ ನಿರೀಕ್ಷೆಗೂ ಮೀರಿ ಹೊರೆ ಕಾಣಿಕೆ ಹರಿದು ಬಂದಿದ್ದು ಉತ್ಸಾಹಿ ಕಾರ್ಯಕರ್ತರ ಶ್ರಮದಾನ, ಸೇವೆ ನಡೆಯಿತು.