ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಶುಕ್ರವಾರದಿಂದ ಮಾ.7ರ ವರೆಗೆ ನಡೆಯಲಿದೆ. ಈ ಕಾರಣದಿಂದಾಗಿ ಮೂಡುಬಿದಿರೆ ಪೇಟೆ ಮಾತ್ರವಲ್ಲ ಇಲ್ಲಿಂದ ಅನತಿ ದೂರದಲ್ಲಿರುವ ಪುತ್ತಿಗೆಯ ಪರಿಸರವನ್ನು ಸಂಪರ್ಕಿಸುವ ಬಹುತೇಕ ಎಲ್ಲ ಮುಖ್ಯರಸ್ತೆಗಳೂ ಕೇಸರಿ ಅಲಂಕಾರದೊಂದಿಗೆ ಕಂಗೊಳಿಸುತ್ತಿವೆ.ದಾರಿಯ ಇಕ್ಕೆಲಗಳಲ್ಲಿ ಅಡಕೆಯ ಕಂಬಗಳನ್ನು ನೆಟ್ಟು ಭಗವಾಧ್ವಜ, ಕೇಸರಿ ಪತಾಕೆಗಳ ಅಲಂಕಾರ ಪುತ್ತಿಗೆಯತ್ತ ಸ್ವಾಗತಿಸುತ್ತಿದೆ . ಫ್ಲೆಕ್ಸುಗಳ ಅಬ್ಬರವೂ ಜೋರಾಗಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನೆಟ್ಟು ಸ್ವಾಗತ ಗೋಪುರ ರಚಿಸಲಾಗಿದೆ.
ಮೂಡುಬಿದಿರೆಯಿಂದ ಒಂಟಿಕಟ್ಟೆ ಪುತ್ತಿಗೆ, ಆಲಂಗಾರಿನಿಂದ ಕೊಡ್ಯಡ್ಕರಸ್ತೆ , ಕಡಂದಲೆ, ಪಾಲಡ್ಕದಿಂದ ಪುತ್ತಿಗೆ, ಮೂಲ್ಕಿ ಕಿನ್ನಿಗೋಳಿ, ಮಂಗಳೂರು ಮುಖ್ಯರಸ್ತೆ ವಿದ್ಯಾಗಿರಿಯಲ್ಲಿ ಮೂಲ್ಕಿ ರಸ್ತೆಗೆ ತೆರಳಿ ಸಂಪಿಗೆಯ ಪುತ್ತಿಗೆ ರಸ್ತೆ ಬಳಿ ನೂತನ ಶಾಶ್ವತ ಗೋಪುರವೂ ಉದ್ಘಾಟನೆಗೆ ಸಜ್ಜಾಗಿದೆ.ಹೊರೆಕಾಣಿಕೆ ಉತ್ಸವ:
ಈ ಪುತ್ತೆ ಆಯನಕ್ಕೆ ಊರ ಪರರೂರ ಅನೇಕ ಗ್ರಾಮಗಳ ಹೊರೆಕಾಣಿಕೆಗೆ ಶುಕ್ರವಾರ ಅಪರಾಹ್ನ ಚಾಲನೆ ದೊರೆಯಲಿದೆ. ಮೂಡುಬಿದಿರೆಯ ಹೊರೆಕಾಣಿ ಕೆ ಅಪರಾಹ್ನ 2ಕ್ಕೆ ಅರಮನೆ ಬಾಗಿಲು ಪರಿಸರದಿಂದ ಹೊರಡಲಿದೆ. ದೇವಳದ ಸಿಬ್ಬಂದಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಹನುಮಂತ ದೇವಸ್ಥಾನ, ಪೇಟೆಯ ಮುಖ್ಯ ಬೀದಿಯಾಗಿ ಸಾಂಸ್ಕೃತಿಕ ಮೆರವಣಿಗೆ, ಹೊರೆಕಾಣಿಕೆಯ ವಾಹನಗಳು ಸ್ವರಾಜ್ಯ ಮೈದಾನ, ಜಂಕ್ಷನ್, ಕನ್ನಡ ಭವನದತ್ತ ತೆರಳಲಿವೆ. ಪಾದಯಾತ್ರಿಗಳಿಗೆ ಅಲ್ಲಿಂದ ನೆಲ್ಲಿಗುಡ್ಡೆವರೆಗೂ ಆಳ್ವಾಸ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಬಸ್ ವ್ಯವಸ್ಥೆ ಇದೆ.ಸಂಸ್ಕೃತಿ ಮೇಳ:
ಒಂಟಿಕಟ್ಟೆಯ ಮುಖ್ಯರಸ್ತೆಯಲ್ಲಿ ಜಂಕ್ಷನ್ ಹಾದು ಪುತ್ತಿಗೆಯತ್ತ ಸಾಗುವಾಗ ಇಕ್ಕೆಲಗಳಲ್ಲಿ ಸಾಂಸ್ಕೃತಿಕ ಮೇಳವನ್ನೇ ಸ್ಥಳೀಯ ಯುವ ಉತ್ಸಾಹಿಗಳು ತೆರೆದಿಟ್ಟಿ ದ್ದಾರೆ. ಕೃಷಿಕನ ಮನೆ, ಕಂಬಳ ಕಟ್ಟೆ, ಈಶ್ವರ, ನೇಜಿ ನೆಡುವ, ತೆನೆ ಮಂಚ, ಬೊಂಬೆ ಯಕ್ಷಗಾನ, ಶಿವಲಿಂಗ ,ತೇರು, ಗಂಗಾಜಲಧಾರೆ, ಕಾಡ ಮನುಷ್ಯರು , ಶಿವಲಿಂಗ ಹೀಗೆ ಸಾಂಸ್ಕೃತಿಕ ಮೇಳವೇ ಭಜಕರನ್ನು ಸ್ವಾಗತಿಸುತ್ತಿದೆ.ಸ್ಥಳೀಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅಯ್ಯಪ್ಪ ಸೇವಾವೃತ, ಸ್ನೇಹ ಯುವಕ ಮಂಡಲದ ನೂರಾರು ಯುವಕರು ಸಂಘಟಿತರಾಗಿ ತ್ಯಾಜ್ಯದ ಬೀಡಾಗಿದ್ದ ಈ ರಸ್ತೆಯ ಇಕ್ಕೆಲವನ್ನು ಮಾದರಿಯಾಗಿ ಮರು ರೂಪಿಸಿದ್ದಾರೆ. ಈ ಸ್ವಚ್ಛತೆಯ ಕಾಯಕ ಕಾಯ್ದು ಕೊಳ್ಳಲಾಗುವುದು ಎಂದು ಸ್ಥಳೀಯರಾದ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ಧಾರೆ.
ಪಾರ್ಕಿಂಗ್ ವ್ಯವಸ್ಥೆ:ಪೇಟೆಯಿಂದ ಒಂಟಿಕಟ್ಟೆ ಪುತ್ತಿಗೆ ಅಥವಾ ಸಂಪಿಗೆ ಮೂಲಕ ಪುತ್ತಿಗೆ ತಲುಪುವವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಒಟ್ಟು 14 ಎಕರೆ ಪ್ರದೇಶವನ್ನು ಸಮತಟ್ಟಾಗಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂತೆ, ಮೇಳಗಳಿಗೂ , ವ್ಯವಹಾರ ಮಳಿಗೆಗಳಿಗೂ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ.
ದೇವಳದ ಪರಿಸರದಲ್ಲಿ ಬೆಳಗ್ಗೆ, ಸಂಜೆ ಉಪಹಾರ, ಅಪರಾಹ್ನ, ರಾತ್ರಿ ಊಟೋ ಪಚಾರಕ್ಕೆ ಭಾರೀ ಭೋಜನ ಮಂಟಪ, ತಯಾರಿಗೆ ಪಾಕಶಾಲೆ ಈಗಾಗಲೇ ಸಜ್ಜಾಗಿದೆ.