ಮೂಡುಬಿದಿರೆ ತಾಲೂಕು ಆಡಳಿತ ಸೌಧ: 79 ನೇ ಸ್ವಾತ್ರಂತ್ರ್ಯೋತ್ಸವ ಆಚರಣೆ

| Published : Aug 17 2025, 04:02 AM IST

ಸಾರಾಂಶ

ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ೭೯ ನೇ ಸ್ವಾತ್ರಂತ್ರ್ಯ ದಿನಾಚರಣೆಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ತಾಲೂಕು ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ, ಮೂಡುಬಿದಿರೆ ತಾಲೂಕು, ದ.ಕ. ಆಶ್ರಯದಲ್ಲಿ ಶುಕ್ರವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ೭೯ ನೇ ಸ್ವಾತ್ರಂತ್ರ್ಯ ದಿನಾಚರಣೆಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿದರು.ಶಾಸಕ ಉಮಾನಾಥ ಕೋಟ್ಯಾನ್ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿದರು. ನಂತರ ಮಾತನಾಡಿದ ತಹಸೀಲ್ದಾರ್‌, ದೇಶಕ್ಕಾಗಿ ಅನೇಕ ಮಹನೀಯರು ಬಲಿದಾನಗೈದು ಸ್ವಾತಂತ್ರ್ಯ ಗಳಿಸಿ ಕೊಟ್ಟಿದ್ದಾರೆ. ಅವರ ಬಲಿದಾನ ವ್ಯರ್ಥವಾಗದಂತೆ ದೇಶಕ್ಕಾಗಿ ಶ್ರಮಿಸೋಣ, ದೇಶಕ್ಕಾಗಿ ಬದುಕಿ ಯಶಸ್ಸಿನ ಪಥದಲ್ಲಿ ಸಾಗೋಣ ಎಂದರು.

ಮೂಡುಬಿದಿರೆ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಸ್ಕೌಟ್ಸ್-ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಪ್ರತಿಭಾ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ, ತ್ರಿವರ್ಣ ಧ್ವಜ ನಮ್ಮ ದೇಶದ ಗೌರವದ ಸಂಕೇತ. ಈ ಸ್ವಾತಂತ್ರ್ಯ ಬರಬೇಕಾದರೆ ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ವ್ಯವನ್ನು ಪಡೆದುಕೊಂಡ ನಾವಿಂದು ಆ ಎಲ್ಲಾ ಮಹನೀಯರನ್ನು ಸ್ಮರಿಸಬೇಕಾದ ದಿನ ಎಂದರು.ಗ್ಯಾರಂಟಿ ಯೋಜನೆ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪುರಸಭಾಧ್ಯೆಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಾಪ್ಪ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಕುಸುಮಾಧರ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಮತ್ತಿತರರಿದ್ದರು.