ತಾಪಮಾನ ಹೆಚ್ಚಳಕ್ಕೆ ಮೂಡಗೂರು ಶ್ರೀ ಆತಂಕ

| Published : May 28 2024, 01:12 AM IST

ಸಾರಾಂಶ

ಜಾಗತಿಕ ತಾಪಮಾನದ ಹೆಚ್ಚಳದಿಂದಾಗಿ ಪ್ರಸ್ತುತ ಪರಿಸರ ವಿಕೋಪ ಎದುರಿಸುತ್ತಿದ್ದೇವೆ ಎಂದು ಮೂಡಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಾಗತಿಕ ತಾಪಮಾನದ ಹೆಚ್ಚಳದಿಂದಾಗಿ ಪ್ರಸ್ತುತ ಪರಿಸರ ವಿಕೋಪ ಎದುರಿಸುತ್ತಿದ್ದೇವೆ ಎಂದು ಮೂಡಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಮಂಚಹಳ್ಳಿ ಬಳಿಯ ಕರಸ್ಥಳ ನಾಗಲಿಂಗಸ್ವಾಮಿ ತಪೋ ಭೂಮಿ (ನಾಗಲಿಂಗಸ್ವಾಮಿ ಗವಿ) ಯಲ್ಲಿ ಸೋಮವಾರ ಬೆಳಗ್ಗೆ ಜಾಗತಿಕ ತಾಪಮಾನ ತಡೆಯಲು ಮರ ಬೆಳೆಸಿ, ಧರೆ ಉಳಿಸಿ ಅಭಿಯಾನದ ಅಂಗವಾಗಿ ಸಸಿ ನೆಟ್ಟು ನೀರೆರದು ಮಾತನಾಡಿದರು. ಪ್ರಪಂಚದಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಪ್ರಕೃತಿ ಹಾಗೂ ಪರಿಸರ ವಿಕೋಪಕ್ಕೆ ಕಾರಣವಾಗಿದ್ದು, ಭೂಮಿಯನ್ನು ತಂಪುಗೊಳಿಸುವ ಅಗತ್ಯ ಅರಿತು ಮೂಡಗೂರು ಶ್ರೀಮಠ ಪರಿಸರ ಪ್ರೀತಿಸುವ ವ್ಯಕ್ತಿಗಳೊಂದಿಗೆ ಕೈಜೋಡಿಸಿದೆ ಎಂದರು.

ಪರಿಸರ ಉಳಿಸಿ, ಬೆಳೆಸುವುದು ಎಲ್ಲರ ಕೆಲಸವಾಗಿದ್ದು, ಗ್ರಾಮಗಳಲ್ಲಿ ಗಿಡ ನೆಡಲು ಪ್ರೀತಿಯಿಂದ ಬರುವ ಯುವಕರಿಗೆ ಮೂಡಗೂರು ಮಠವು ಉಚಿತವಾಗಿ ಸಸಿ ನೀಡುವುದಾಗಿ ಘೋಷಿಸಿದರು. ಜಾಗತಿಕ ತಾಪಮಾನ ತಡೆಯಲು ಸಾರ್ವಜನಿಕರು ಮರ ಬೆಳೆಸಿ, ಧರೆ ಉಳಿಸಿ ಅಭಿಯಾನಕ್ಕೆ ಸ್ವಯಂ ಪ್ರೇರಿತರಾಗಿ ಮುಂದೆ, ಅಭಿಯಾನಕ್ಕೆ ಕೈ ಜೋಡಿಸಿದರೆ, ಪ್ರಕೃತಿ ವಿಕೋಪದ ಮುನಿಸು ತಡೆಯಬಹುದಾಗಿದೆ ಎಂದರು.

ಮಂಚಹಳ್ಳಿ ಕರಸ್ಥಲ ನಾಗಲಿಂಗಸ್ವಾಮೀಜಿ ಗವಿಯಲ್ಲಿ ನಡೆದ ಅಭಿಯಾನದಲ್ಲಿ ಮಂಚಹಳ್ಳಿ ಗ್ರಾಮಸ್ಥರು, ಕರಸ್ಥಲದ ನಾಗಲಿಂಗಸ್ವಾಮಿ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್), ಆಲತ್ತೂರು ಗ್ರಾಮದ ಪೋಸ್ಟ್‌ ಮಾಸ್ಟರ್ ಟಿ.ಶಾಂತೇಶ್‌ ಸೇರಿದಂತೆ ಹಲವು ಯುವಕರು ಇದ್ದರು.