ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ಸಪ್ತಾಹ - 2026 ರ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ಸಪ್ತಾಹ - 2026 ರ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರು ಆಧುನಿಕ ಕಾಲದಲ್ಲಿ ಮಹಿಳೆಯರ ಸಮಸ್ಯೆ ಮತ್ತು ಸವಾಲು ಹಾಗೂ ಸ್ತ್ರೀ ಸ್ವಾತಂತ್ರ್ಯ ಪರಿಕಲ್ಪನೆಯ ಜೊತೆಗೆ ಡಾ. ಶಿವರಾಮ ಕಾರಂತರ ಕೃತಿಗಳಲ್ಲಿ ಮತ್ತು ಬದುಕಿನಲ್ಲಿ ಸ್ತ್ರೀ ಪರ ಧೋರಣೆಗಳನ್ನು ಸನ್ನಿವೇಶಗಳೊಂದಿಗೆ ತಿಳಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಕಾಲೇಜಿನ ದ್ವಿತೀಯ ಬಿಸಿಎಯ ಶ್ರೀ ರಕ್ಷಾ, ಪ್ರಥಮ ಬಿಸಿಎಯ ಶ್ರೀನಿಧಿ, ತೃತೀಯ ಬಿಸಿಎಯ ರಶಿತಾ ಹಾಗೂ ದ್ವಿತೀಯ ಬಿಬಿಎಯ ಸುಹಾನಿ ಅವರು ಮಹಿಳಾ ದಿನಾಚರಣೆಯ ಪ್ರಯುಕ್ತ ತಮ್ಮ ಕವನಗಳನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಓದುವಿಕೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬಲಪಡಿಸುತ್ತದೆ, ಉತ್ತಮ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಉಪನ್ಯಾಸಕ ಸಂಯೋಜಕಿಯರಾದ ಪ್ರೊ. ರೇವತಿ, ಪ್ರೊ. ರಾಜೇಶ್ವರಿ ಶೆಟ್ಟಿ, ಪ್ರೊ. ಭಾರತಿ ಗಾಣಿಗ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರರು ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ಕಾರ್ಯ ವೈಖರಿಗಳನ್ನು ತಿಳಿಸಿದರು. ದ್ವಿತೀಯ ಬಿಸಿಎ ಶ್ರೀರಕ್ಷಾ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು ಹಾಗೂ ತೃತೀಯ ಬಿಸಿಎ ರಶಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.