ಇಲ್ಲಿನ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇದರ ಬಿಎಸ್‌ಸಿ ನರ್ಸಿಂಗ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉಡುಪಿಯ ದೊಡ್ಡಣಗುಡ್ಡೆಯ ಎ.ವಿ. ಬಾಳಿಗ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇದರ ಬಿಎಸ್‌ಸಿ ನರ್ಸಿಂಗ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉಡುಪಿಯ ದೊಡ್ಡಣಗುಡ್ಡೆಯ ಎ.ವಿ. ಬಾಳಿಗ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ದೇಶವಾದ ಆತ್ಮಹತ್ಯೆ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವುದು, ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸುವುದು ಹಾಗೂ ಭಾವನಾತ್ಮಕ ಸಂಕಷ್ಟದಲ್ಲಿರುವವರು ಸಮಯೋಚಿತವಾಗಿ ಸಹಾಯ ಮತ್ತು ಬೆಂಬಲವನ್ನು ಪಡೆಯುವಂತೆ ಪ್ರೇರೇಪಿಸುವುದಾಗಿತ್ತು.

ಎ.ವಿ.ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಹಾಗೂ ನರ್ಸಿಂಗ್ ಅಧಿಕ್ಷಕಿ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಉಪನ್ಯಾಸಕಿ ಚೇತನಾ ಆರ್. ವೇದಿಕೆಯಲ್ಲಿದ್ದರು.

ಸಿಂಚನಾ ಕಾರ್ಯಕ್ರಮ ನಿರೂಪಿಸಿದರು. ಅಂಕಿತಾ ಸ್ವಾಗತ ಭಾಷಣ ಮಾಡಿದರು ಹಾಗೂ ಶೋಭಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ನೃತ್ಯ, ಮನೋವೈಜ್ಞಾನಿಕ ಆಟ, ಕಿರು ನಾಟಕಗಳ ಮೂಲಕ ಸಂಕಷ್ಟದಲ್ಲಿರುವವರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವುದು, ಪರಿಣಾಮಕಾರಿ ಸಂವಹನ, ಭಾವನಾತ್ಮಕ ಬೆಂಬಲ ನೀಡುವುದು, ಎಚ್ಚರಿಕೆಯ ಲಕ್ಷಣಗಳನ್ನು ಗುರುತಿಸುವುದು ಹಾಗೂ ಅಗತ್ಯವಿದ್ದಾಗ ಸಮಯೋಚಿತ ವೃತ್ತಿಪರ ಸಹಾಯ ಪಡೆಯುವುದು ಮುಂತಾದ ಪ್ರಮುಖ ಸಂದೇಶಗಳನ್ನು ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೇಯಾ ವಂದಿಸಿದರು. ಕಾರ್ಯಕ್ರಮವು ‘ಪ್ರತಿಯೊಂದು ಜೀವವೂ ಅಮೂಲ್ಯ; ಯಾರೂ ತಮ್ಮ ಸಂಕಷ್ಟವನ್ನು ಏಕಾಂಗಿಯಾಗಿ ಎದುರಿಸಬೇಕಾಗಿಲ್ಲ’ ಎಂಬ ಮಹತ್ವದ ಸಂದೇಶವನ್ನು ಸಾರುವ ಮೂಲಕ ಯಶಸ್ವಿಯಾಯಿತು.