ಮೂಡುಬಿದಿರೆ: ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಡೆಯಲಿರುವ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ನಡೆಯಿತು.

ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂಡುಬಿದಿರೆಯ ಜನತೆ ಒಗ್ಗೂಡಿ ಡಾ. ಮೋಹನ ಆಳ್ವರಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಕುರಿತು ಚರ್ಚಿಸಲಾಯಿತು. ಸಮಾರಂಭದ ಅಂಗವಾಗಿ ಪ್ರತಿ ವರ್ಷ ಡಾ. ಮೋಹನ ಆಳ್ವ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ನೆರವು ನೀಡುವುದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಧನ ಒದಗಿಸುವುದು ಹಾಗೂ ಅವರ ಸಾಧನೆಗಳನ್ನು ದಾಖಲಿಸುವ ಗ್ರಂಥವನ್ನು ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಉಮಾನಾಥ ಎ. ಕೋಟ್ಯಾನ್ ತಿಳಿಸಿದರು.ಮಾಜಿ ಸಚಿವ ಕೆ. ಅಭಯಚಂದ್ರ ಮಾತನಾಡಿ, ಅಭಿನಂದನಾ ಸಮಾರಂಭವನ್ನು ಕನ್ನಡ ಭವನದಲ್ಲೇ ಆಯೋಜಿಸುವಂತೆ ಸಲಹೆ ನೀಡಿದರು. ಅಲ್ಲದೆ ತಮ್ಮ ವೈಯಕ್ತಿಕ ಕೊಡುಗೆಯಾಗಿ ಒಂದು ಲಕ್ಷ ರು. ದೇಣಿಗೆ ಘೋಷಿಸಿದರು.ಸಭೆಯಲ್ಲಿ ಉದ್ಯಮಿ ಶ್ರೀಪತಿ ಭಟ್, ನಾರಾಯಣ ಪಿ.ಎಂ., ಚೌಟರ ಅರಮನೆ ಕುಲದೀಪ್ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಆಳ್ವಾಸ್ ಆಸ್ಪತ್ರೆಯ ಹಿರಿಯ ವೈದ್ಯ ಹರೀಶ್ ನಾಯಕ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್, ರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಜಯರಾಮ್ ಕೋಟ್ಯಾನ್, ನ್ಯಾಯವಾದಿ ಶ್ವೇತಾ ಜೈನ್, ಕೆ.ಪಿ. ಜಗದೀಶ್ ಅಧಿಕಾರಿ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ಉದ್ಯಮಿ ಪೂರ್ಣಚಂದ್ರ ಜೈನ್, ಮಹೇಂದ್ರ ವರ್ಮ, ಅಶ್ವಿನ್ ಜೆ. ಪಿರೇರಾ, ಅಬುಲ್ ಅಲಾ, ವಿಶ್ವನಾಥ್ ಕಾಮತ್ ಬೋಳ, ವೆಂಕಟರಮಣ ಹನುಮಂತ ದೇವಳಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಮುರಳಿಕೃಷ್ಣ, ಪಡುಮಾರ್ನಾಡು ದಯಾನಂದ ಪೈ, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ದಿವಾಕರ್ ಬಂಗೇರ, ರಿಕ್ಷಾ ಯೂನಿಯನ್ ಅಧ್ಯಕ್ಷ ದೀಪಕ್ ರಾಜ್, ರಾಜೇಶ್ ಸುವರ್ಣ ಹಾಗೂ ರಾಹುಲ್ ಕುಲಾಲ್ ಉಪಸ್ಥಿತರಿದ್ದರು.ಜಾತಿ, ಮತ ಹಾಗೂ ಧರ್ಮದ ಭೇದಗಳನ್ನು ಮೀರಿ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಮೋಹನ ಆಳ್ವರನ್ನು ಮೂಡುಬಿದಿರೆಯ ಜನತೆ ಗೌರವಪೂರ್ವಕವಾಗಿ ಸನ್ಮಾನಿಸಬೇಕು. ಅಲ್ಲದೆ ರಾಷ್ಟ್ರದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಲ್ಲಿ ಒಂದನ್ನು ಅವರಿಗೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ರಾಮಚಂದ್ರ ಮಿಜಾರು ಅಭಿನಂದನಾ ಸಮಾರಂಭದ ರೂಪುರೇಷೆಗಳ ಕುರಿತು ಮಾಹಿತಿ ನೀಡಿ ವಂದಿಸಿದರು.