ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗವು ಬೆಂಗಳೂರಿನ ಅಭಿನವ ಪ್ರಕಾಶನದ ಸಹಯೋಗದಲ್ಲಿ ‘ಡಾ. ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ-ಪ್ರೀತಿಯ ಸಖ್ಯ’ ಕಾರ್ಯಕ್ರಮವನ್ನು ಶನಿವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರು ಬಹುಮುಖಿ ಚಿಂತಕರಾಗಿದ್ದು, ತಮ್ಮದೇ ಆದ ವಿಶಿಷ್ಟ ಓದುಗ ವಲಯವನ್ನು ಹೊಂದಿದವರು. ಜನಸಾಮಾನ್ಯರ ಬದುಕಿಗೆ ಹತ್ತಿರವಾದ ಸಾಮಾಜಿಕ ವಿಚಾರಗಳನ್ನು ಆಧರಿಸಿ ಕೃತಿಗಳನ್ನು ರಚಿಸಿದ್ದು, ಅದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು. ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ಅವರು ಹೊಸ ತಲೆಮಾರಿನ ಯುವಕರಿಗೆ ಪ್ರೇರಣೆ ನೀಡುತ್ತಾ ಬಂದವರು. ಗೋಪಾಲಕೃಷ್ಣ ಅಡಿಗರ ನಂತರ ಕನ್ನಡ ಸಾಹಿತ್ಯ ಬೆಳವಣಿಗೆಯ ಹಾದಿಯನ್ನು ತಮ್ಮ ವಿಮರ್ಶಾ ಗ್ರಂಥಗಳಲ್ಲಿ ಚಿತ್ರಿಸಿರುವುದಲ್ಲದೆ, ಕುವೆಂಪು, ಅನಕೃ ಹಾಗೂ ಶಿವರುದ್ರಪ್ಪರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು ಎಂದು ಅಭಿಪ್ರಾಯಪಟ್ಟರು.ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ, ಸಾಹಿತ್ಯದಲ್ಲಿ ಅಪಾರ ಶಕ್ತಿ ಇದೆ ಎಂಬುದನ್ನು ಸಮಾಜದಲ್ಲಿ ಅರಿವು ಮೂಡಿಸಿದವರು ನರಹಳ್ಳಿಯವರು ಎಂದರು.ಸಂವಾದದಲ್ಲಿ ಮಾತನಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೀತಿ ವ್ಯಾಖ್ಯಾನಕ್ಕೆ ಸಿಗದ ವಿಸ್ಮಯಕರ ಭಾವನೆ. ಅದು ಸ್ವಾರ್ಥರಹಿತವಾಗಿದ್ದು, ಅನುಭವದ ಮೂಲಕವೇ ಅದರ ಸಾರ್ಥಕತೆ ಅರಿಯಲು ಸಾಧ್ಯ. ಕುವೆಂಪು, ಬೇಂದ್ರೆ, ಪುತೀನ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಕವಿಗಳು ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ಸಾಹಿತ್ಯದಲ್ಲಿ ಚಿತ್ರಿಸಿರುವುದನ್ನು ವಿವರಿಸಿದರು. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರ ಜೀವನಪ್ರೀತಿ ಮತ್ತು ವ್ಯಕ್ತಿತ್ವ ಕುರಿತು ಮೈಸೂರು ಮಹಾಜನ ಕಾಲೇಜಿನ ಕನ್ನಡ ವಿಭಾಗದ ಡಾ. ಎಚ್.ಆರ್. ತಿಮ್ಮೇ ಗೌಡ ಹಾಗೂ ಅವರ ಸಾಹಿತ್ಯಪ್ರೀತಿ ಕುರಿತು ಹೊನ್ನಾವರ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ನಾಗರಾಜ ಹೆಗಡೆ ಅಪಗಾಲ ವಿಚಾರ ಮಂಡಿಸಿದರು.ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ಸಂವಾದ ನಿರ್ವಹಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.
ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ಬೆಂಗಳೂರಿನ ಅಭಿನವ ಪ್ರಕಾಶನದ ನ. ರವಿಕುಮಾರ ವಂದಿಸಿದರು. ವಿದ್ಯಾರ್ಥಿನಿಯರಾದ ಸೌಮ್ಯ ಕುಂದರ್ ಹಾಗೂ ಅನೀಶಾ ಶೆಟ್ಟಿ ನಿರೂಪಿಸಿದರು.‘ಯಶೋಧಾ ಪ್ರಜ್ಞೆ’ಯ ಲೇಖಕಿ ರಜನಿ ನರಹಳ್ಳಿ ಹಾಗೂ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು.