ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಿಕ್ಷಕರಿಗಾಗಿ ಅಧ್ಯಾಪಕರ ಕೌಶಲ್ಯ ಹಾಗೂ ಸಾಮರ್ಥ್ಯ ವೃದ್ಧಿ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಯಿತು. ಬೋಧನಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಉಂಟಾಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಂಡು ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಗಾರದಲ್ಲಿ ಸಂಸ್ಥೆಯ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದರು.
ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಿಕ್ಷಕರಿಗಾಗಿ ಅಧ್ಯಾಪಕರ ಕೌಶಲ್ಯ ಹಾಗೂ ಸಾಮರ್ಥ್ಯ ವೃದ್ಧಿ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಯಿತು. ಬೋಧನಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಉಂಟಾಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಂಡು ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಗಾರದಲ್ಲಿ ಸಂಸ್ಥೆಯ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ರಾಷ್ಟ್ರದ ಭವಿಷ್ಯವು ತರಗತಿ ಕೊಠಡಿಯಲ್ಲಿ ರೂಪುಗೊಳ್ಳುತ್ತದೆ. ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ, ಮೌಲ್ಯ ಮತ್ತು ಕನಸುಗಳನ್ನು ರೂಪಿಸುವ ಶಿಲ್ಪಿಗಳು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕಾಲಾನುಗುಣವಾಗಿ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರ ಜೊತೆಗೆ ಅವರೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದು ಹೇಳಿದರು.ನಿರಂತರ ಕಲಿಕೆಯಿಂದ ಶಿಕ್ಷಣ ವ್ಯವಸ್ಥೆ ಸದೃಢ: ರಶ್ಮಿತಾ ಜೈನ್ ಅಭಿಪ್ರಾಯ
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಶಿಕ್ಷಕರು ಜೀವನಪೂರ್ತಿ ಕಲಿಯುವ ಮನೋಭಾವ ಹೊಂದಿದಾಗ ಮಾತ್ರ ಶಿಕ್ಷಣ ವ್ಯವಸ್ಥೆ ಸದೃಢವಾಗುತ್ತದೆ. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಅವರಿಗೆ ಪ್ರೇರಣೆಯಾಗುವ ಶಿಕ್ಷಕರೇ ನಿಜವಾದ ಆದರ್ಶ ಶಿಕ್ಷಕರು. ಇಂತಹ ಕಾರ್ಯಗಾರಗಳು ಶಿಕ್ಷಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಬೋಧನೆಯಲ್ಲಿ ಹೊಸತನ ತರಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.ಕಾರ್ಯಗಾರದಲ್ಲಿ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ಪರಿಣಾಮಕಾರಿ ಬೋಧನಾ ವಿಧಾನಗಳು, ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ಹಾಗೂ ಸಂವಹನ ಕೌಶಲ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಕರ ಯಶಸ್ಸು ಅವರು ಬೋಧಿಸುವ ವಿಷಯದಲ್ಲಷ್ಟೇ ಅಲ್ಲ, ವಿದ್ಯಾರ್ಥಿಗಳೊಂದಿಗೆ ನಿರ್ಮಿಸುವ ನಂಟಿನಲ್ಲಿಯೂ ಅಡಕವಾಗಿದೆ. ವಿದ್ಯಾರ್ಥಿಗಳ ಕುತೂಹಲವನ್ನು ಉತ್ತೇಜಿಸುವ ರೀತಿಯಲ್ಲಿ ಪಾಠ ಬೋಧಿಸಿದಾಗ ಕಲಿಕೆಯ ಪ್ರಕ್ರಿಯೆ ಅರ್ಥಪೂರ್ಣವಾಗುತ್ತದೆ. ಶಿಕ್ಷಕರು ತರಗತಿಯಲ್ಲಿ ಸೃಜನಾತ್ಮಕ ಚಟುವಟಿಕೆಗಳು, ತಂತ್ರಜ್ಞಾನ ಬಳಕೆ ಹಾಗೂ ಸಂವಾದಾತ್ಮಕ ವಿಧಾನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಮಹತ್ವ, ವಿದ್ಯಾರ್ಥಿಗಳ ಮನೋವೈಜ್ಞಾನಿಕ ಬೆಳವಣಿಗೆ ಹಾಗೂ ಫಲಿತಾಂಶ ಕೇಂದ್ರೀಕೃತ ಬೋಧನಾ ವಿಧಾನಗಳ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಇಂದಿನ ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕದ ಜ್ಞಾನದಿಂದ ತೃಪ್ತರಾಗುವುದಿಲ್ಲ. ಅವರಿಗೆ ಜೀವನ ಕೌಶಲ್ಯ, ಚಿಂತನಾ ಸಾಮರ್ಥ್ಯ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಶಿಕ್ಷಕರು ತಮ್ಮ ಬೋಧನೆಯಲ್ಲಿ ನವೀನತೆ ಮತ್ತು ಪ್ರೇರಣೆಯನ್ನು ಸೇರಿಸಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಆಡಳಿತಾಧಿಕಾರಿಗಳು, ವಿದ್ಯಾರ್ಥಿ ವಸತಿ ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೃತ್ತಿಪರತೆ ವಿಷಯದ ಕುರಿತಾಗಿ ತರಬೇತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಕಾರ್ಯಕ್ರಮವು ಶಿಕ್ಷಕರ ಪರಿಶ್ರಮ ಮತ್ತು ಸಮರ್ಪಣೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿ ಗಮನ ಸೆಳೆಯಿತು.ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್ ಸ್ವಾಗತಿಸಿದರು. ಉಪ ಮುಖ್ಯೋಪಾಧ್ಯಾಯ ಜಯಶೀಲ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು. ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಆಯೋಜಿಸಲಾದ ಈ ಕಾರ್ಯಗಾರವು ಶಿಕ್ಷಕರಿಗೆ ಹೊಸ ಚಿಂತನೆ, ಪ್ರೇರಣೆ ಹಾಗೂ ವೃತ್ತಿಪರ ನೈಪುಣ್ಯವನ್ನು ನೀಡಿದ ಪರಿಣಾಮಕಾರಿ ವೇದಿಕೆಯಾಯಿತು.